ಉರುಮಣೆ : ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದ್ರಸಾ ವಿದ್ಯಾರ್ಥಿಗಳಿಂದ ಮಾದಕದ್ರವ್ಯ ವಿರುದ್ಧದ ಏಕದಿನ ಶಿಬಿರ ಬಹಳ ಅದ್ದೂರಿಯಾಗಿ ನಡೆಯಿತು.

ಮಾದಕದ್ರವ್ಯದ ಬಲೆಗೆ ಸಿಲುಕಿ ದಾರಿ ತಪ್ಪುತ್ತಿರುವ ಯುವ ಪೀಳಿಗೆಯನ್ನು ಎಚ್ಚರಿಸಿ, ಸನ್ಮಾರ್ಗದತ್ತ ಕೊಂಡೊಯ್ಯುವ ಉದ್ದೇಶದಿಂದ ಕೈಗೊಂಡ ಶಿಬಿರವು ಯಶಸ್ವಿಯಾಗಿ ನಡೆಯಿತು. ಅಧ್ಯಾಪಕರು ಹಾಗೂ ಮದ್ರಸಾ ಸಮಿತಿಯ ಮುಂದಾಳತ್ವದಲ್ಲಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ವಿವಿಧ ಆಧ್ಯಾತ್ಮಿಕ ತರಗತಿ, ದೈಹಿಕ ವ್ಯಾಯಾಮ ಹಾಗೂ ಪ್ರೇರಕ ತರಗತಿಗಳನ್ನು ಏರ್ಪಡಿಸಲಾಯಿತು.
ಉರುಮಣೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಖತೀಬರಾದ ಇಕ್ರಾಮುಲ್ಲಾ ಸಖಾಫಿ ಅಲ್ ಖಾಮಿಲಿ ಉಸ್ತಾದರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಸದರ್ ಮುಅಲ್ಲಿಂ ಸಿನಾನ್ ಸಖಾಫಿ ಅಲ್ ಮಳ್ಹರಿ ಸ್ವಾಗತಿಸಿದರು. ಅಧ್ಯಕ್ಷರಾದ ಎಂ.ಕೆ ಅಬ್ಬಾಸ್ ಮದ್ಪಾಡಿಯವರು ವಿದ್ಯಾರ್ಥಿಗಳಲ್ಲಿ ಭವಿಷ್ಯದ ನಾಯಕತ್ವ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇಸ್ಮಾಯಿಲ್ ಸಅದಿ ಉಸ್ತಾದ್, ಕಬೀರ್ ಕುವೆನಾಡು, ಶಾಹುಲ್ ಹಮೀದ್,ಕಾವುಞಿ ಉಪಸ್ಥಿತರಿದ್ದರು. ಳುಹಾ ನಮಾಝ್, ಖಬರ್ ಝಿಯಾರತ್, ಅವೇರ್ನೆಸ್ ಮಾರ್ಚ್, ತಜ್ವೀದ್ ಮತ್ತು ಪ್ರೇರಕ ತರಗತಿ,ಕ್ವಿಝ್, ಪ್ರತಿಜ್ಞಾ ವಾಚನ ಸೇರಿದಂತೆ ಹಲವಾರು ಸೆಷನ್’ಗಳ ಮೂಲಕ ಉಸ್ತಾದ್ ಇಕ್ರಾಮುಲ್ಲಾ ಸಖಾಫಿ ಅಲ್ ಖಾಮಿಲಿ, ಸಿನಾನ್ ಸಖಾಫಿ ಅಲ್ ಮಳ್ಹರಿ,ಅಬ್ದುಲ್ ಬಶೀರ್ ಝುಹ್ರಿ, ಹನೀಫ್ ರಝ್ವಿ ಹಾಗೂ ಫಾರೂಖ್ ಸಖಾಫಿ ಅಲ್ ಮಳ್ಹರಿಯವರ ಮೇಲ್ನೋಟದಲ್ಲಿ ನಡೆಸಲಾಯಿತು.
ವರದಿ: ಫಾರೂಖ್ ಆನೆಕಲ್ಲ್.




m

