Featured, ಅಂಕಣ, ಇತರೆ, ಸ್ಥಳೀಯ

ಶಾಂತಿ ಸಭೆಯಲ್ಲೂ ದ್ವೇಷ ವಾಂತಿ ಮಾಡಿದ ಶಾಸಕ ಹರೀಶ್ ಪೂಂಜಾ ನಡೆ ಖಂಡನೀಯ : ಅಕ್ಬರ್ ಬೆಳ್ತಂಗಡಿ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಶಾಂತಿ ಸಭೆಯಲ್ಲಿ ನೀಡಿದ ಅಸಂಬದ್ಧ ಮತ್ತು ದ್ವೇಷಭರಿತ ಹೇಳಿಕೆಗಳನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೀವ್ರವಾಗಿ ಖಂಡಿಸುತ್ತದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಆಯೋಜಿಸಲಾದ ಶಾಂತಿ ಸಭೆಯಲ್ಲಿ, ಶಾಸಕ ಹರೀಶ್ ಪೂಂಜಾ ಅವರು ಗೋಹತ್ಯೆ ಮತ್ತು ಲವ್ ಜಿಹಾದ್‌ನಂತಹ ಸಂಘಪರಿವಾರದ ಸುಳ್ಳಿನ ಆರೋಪಗಳನ್ನು ಒಡ್ಡುವ ಮೂಲಕ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುವುದು ಖೇದಕರ ಮತ್ತು ಖಂಡನೀಯ.

ಶಾಂತಿ ಸಭೆಯಂತಹ ವೇದಿಕೆಯನ್ನು ದ್ವೇಷಭಾಷಣದ ಮೂಲಕ ಅಶಾಂತಿಯ ಕೇಂದ್ರವನ್ನಾಗಿಸುವ ಶಾಸಕರ ಕ್ರಿಯೆ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವ ಜವಾಬ್ದಾರಿಯಿಂದ ವಿಮುಖವಾಗಿರುವುದನ್ನು ತೋರಿಸುತ್ತದೆ. ಇಂತಹ ವೇದಿಕಗಳು ಸಾಮಾಜಿಕ ಐಕ್ಯತೆಯನ್ನು ಬಲಪಡಿಸಬೇಕೇ ಹೊರತು, ಧರ್ಮದ ಆಧಾರದಲ್ಲಿ ವಿಭಜನೆಯನ್ನು ಸೃಷ್ಟಿಸುವ ಸಾಧನವಾಗಬಾರದು. ಶಾಸಕರ ಈ ಧೋರಣೆಯಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಮತ್ತಷ್ಟು ಧಕ್ಕೆ ಉಂಟಾಗುವ ಸಾಧ್ಯತೆಯಿದೆ.

ಪುತ್ತೂರಿನಲ್ಲಿ ಶಾಸಕರ ಪಕ್ಷದ ನಾಯಕರೊಬ್ಬರ ಪುತ್ರನಿಗೆ ಸಂಬಂಧಿಸಿದ ಅತ್ಯಾಚಾರ ಮತ್ತು ದ್ರೋಹದ ಪ್ರಕರಣದ ಬಗ್ಗೆ ಶಾಸಕರಿಗೆ ಅರಿವಿಲ್ಲದಿರುವುದು ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. ಇದೇ ರೀತಿ, ಬಜರಂಗದಳದ ಕೆಲವು ನಿರುದ್ಯೋಗಿಗಳು ಗೋಸಾಗಾಟದ ವಾಹನಗಳನ್ನು ತಡೆದು, ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ದರೋಡೆ ನಡೆಸುತ್ತಿರುವ ಘಟನೆಗಳ ಬಗ್ಗೆಯೂ ಶಾಸಕರಿಗೆ ಮಾಹಿತಿಯಿಲ್ಲದಿರುವುದು ಆಶ್ಚರ್ಯಕರ. ಇಂತಹ ಗಂಭೀರ ವಿಷಯಗಳ ಬಗ್ಗೆ ಮೌನವಾಗಿರುವ ಶಾಸಕರು, ಶಾಂತಿ ಸಭೆಯಲ್ಲಿ ದ್ವೇಷದ ಭಾಷಣದ ಮೂಲಕ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಜವಾಬ್ದಾರಿಯುತ ಜನಪ್ರತಿನಿಧಿಯ ಲಕ್ಷಣವಲ್ಲ ಎಂದು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಪತ್ರಿಕಾ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.

ಪೂಂಜಾರವರು ಶಾಂತಿ ಸಭೆಯಲ್ಲಿ ದ್ವೇಷದ ವಾಂತಿ ಮಾಡಿದರೂ ಯಾವುದೇ ಜನ ಪ್ರತಿನಿಧಿಗಳು, ಉಸ್ತುವಾರಿ ಸಚಿವರು, ಗೃಹ ಸಚಿವರು, ಸ್ಪೀಕರ್ ಸಾಹೇಬ್ರು ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಅಚ್ಚರಿ ಉಂಟು ಮಾಡಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಆಯೋಜಿಸಲಾದ ಕಾರ್ಯಕ್ರಮವು, ಇಂತಹ ದ್ವೇಷಭರಿತ ಹೇಳಿಕೆಗಳಿಂದ ಕಲುಷಿತವಾಗಿರುವುದು ದುರಂತ. ಶಾಸಕರು ಒಂದು ಧರ್ಮಕ್ಕೆ ಸೀಮಿತವಾಗಿರುವ ಹೇಳಿಕೆ, ದ್ವೇಷ ಭಾಷಣ, ಕೋಮುವಾದಕ್ಕೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಿ ರಾಜ್ಯದ ಮುಂದೆ ಬೆಳ್ತಂಗಡಿಯ ಮಾನ ಕಾಪಾಡಲು ಮುಂದಾಗಬೇಕು ಎಂದು ಕಿವಿ ಮಾತು ನೀಡಿದ್ದಾರೆ.

m

Related Posts