ಇತರೆ, ಸ್ಥಳೀಯ

ಜಟ್ಟಿಪ್ಪಳ್ಳ : ನಿರ್ಲಕ್ಷ್ಯದಿಂದ ಹದಗೆಡುತ್ತಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿ

ಜಟ್ಟಿಪ್ಪಳ್ಳ ಭಾಗದ ನಾಗರಿಕರ ದೈನಂದಿನ ಕುಡಿಯುವ ನೀರಿನ ಮೂಲವಾಗಿರುವ ಸರಕಾರಿ ಬಾವಿ ಈಗ ಗಂಭೀರ ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಾರ್ವಜನಿಕರ ಆರೋಗ್ಯಕ್ಕೂ ಅಪಾಯ ಉಂಟುಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಬಾವಿಯಲ್ಲಿ ಹೂಳು ತೆಗೆಯದೆ ಇರುವುದು, ಮರದ ಎಲೆಗಳು, ಕೊಳೆ ಹಾಗೂ ಮಳೆಗಾಲದಲ್ಲಿ ಸೇರಿರುವ ಮಣ್ಣು–ಕಸದ ಪರಿಣಾಮವಾಗಿ ನೀರು ಸಂಪೂರ್ಣ ಮಸಕಾಗಿದ್ದು, ಬಳಸಲು ಅಯೋಗ್ಯವಾಗಿದೆ.

 

ಸುಳ್ಯ ಕಸಾಬ ಗ್ರಾಮದ ಜಟ್ಟಿಪ್ಪಳ್ಳದ ಹೃದಯಭಾಗದಲ್ಲಿ ಇರುವ ಸಾರ್ವಜನಿಕ ಬಾವಿ, ಹಲವು ದಶಕಗಳಿಂದ ಸ್ಥಳೀಯರ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು. ಆದರೆ ಇದೀಗ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಾವಿಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಉಪಯೋಗಕ್ಕೆ ಅಯೋಗ್ಯವಾಗುವ ಮಟ್ಟಕ್ಕೆ ತಲುಪಿದೆ. ಸ್ಥಳೀಯರು ಪ್ರತಿನಿತ್ಯ ಈ ಬಾವಿಯಿಂದಲೇ ಕುಡಿಯುವ ನೀರನ್ನು ಸಂಗ್ರಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನೀರಿನಿಂದ ದುರ್ವಾಸನೆ ಬರುತ್ತಿರುವುದು, ಬಣ್ಣ ಬದಲಾಗಿರುವುದು ಮತ್ತು ನೆಲದೇಜಿನ ಹೂಳು ಮಿಶ್ರಣಗೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.ಮರದ ಎಲೆಗಳು, ಹೂಳು ಮತ್ತು ಹಲವು ವರ್ಷಗಳಿಂದ ಸ್ವಚ್ಛತೆ ಕಾರ್ಯ ನಡೆಯದಿರುವ ಪರಿಣಾಮ ನೀರು ಸಂಪೂರ್ಣ ಮಸಕಾಗಿದ್ದು, ದುರ್ವಾಸನೆ ಉಂಟಾಗಿದೆ. ಮಳೆಗಾಲದಲ್ಲಿ ಚರಂಡಿ ನೀರು ಸೇರಿ ಬಾವಿ ಮತ್ತಷ್ಟು ಕಲ್ಮಶಗೊಂಡಿರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಅಪಾಯ ಉಂಟಾಗಿದೆ.

ಸ್ಥಳೀಯರು ಹಲವು ಬಾರಿ ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. “ಜನರ ಜೀವಜಲವಾದ ಬಾವಿ ಹಾಳಾಗುತ್ತಿದರೂ ಯಾರಿಗೂ ಕಾಳಜಿ ಇಲ್ಲ. ಶುದ್ಧ ಕುಡಿಯುವ ನೀರಿಗಾಗಿ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ,” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ತುರ್ತು ಮನವಿ : ನಗರಾಡಳಿತ ಸ್ಪಂದಿಸಬಹುದೇ?

ಇದೀಗ ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಜನಸಾಮಾನ್ಯರ ಕುಡಿಯುವ ನೀರಿನ ಅವಶ್ಯಕತೆಯನ್ನು ಮನಗಂಡು, ತಕ್ಷಣ ಸಾರ್ವಜನಿಕ ಬಾವಿಯನ್ನು ಸ್ವಚ್ಛಗೊಳಿಸಿ ಶುದ್ಧ ನೀರು ಲಭ್ಯವಾಗುವಂತೆ ತುರ್ತು ಕ್ರಮ ಕೈಗೊಳ್ಳಬೇಕು, ಬಾವಿಯನ್ನು ಸ್ವಚ್ಛಗೊಳಿಸುವುದಲ್ಲದೆ, ಹೂಳು–ಮಣ್ಣು ತೆಗೆದು ಶುದ್ಧೀಕರಣ ಕಾರ್ಯ ನಡೆಸಿ, ಭವಿಷ್ಯದಲ್ಲಿ ನೀರು ಮಸಕಾಗದಂತೆ ಕಟ್ಟುನಿಟ್ಟಿನ ನಿರ್ವಹಣಾ ಕ್ರಮ ಜಾರಿಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.