ಆರೋಗ್ಯ, ಇತರೆ, ಸ್ಥಳೀಯ

ಐಷಾರಾಮಿ ಖಾಸಗಿ ಆಸ್ಪತ್ರೆಗಳಿಗೂ ಮಿಗಿಲಾದ ಸೇವೆ – ಚಿಕಿತ್ಸೆಯ ಜೊತೆಗೆ ಸಾಂತ್ವನ, ಕರ್ತವ್ಯದ ಜೊತೆಗೆ ಕಾಳಜಿ – ಇವೆಲ್ಲವೂ ಒಟ್ಟಾಗಿ ಕಾಣಿಸಿಕೊಂಡದ್ದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ

ಮಗನ ICU ಚಿಕಿತ್ಸೆಯಲ್ಲಿ ಕಂಡ ಮಾನವೀಯ ಆರೈಕೆ — ತಂದೆಯ ಮನದಾಳದ ಮಾತು..! : ತಾಜುದ್ದೀನ್ ಟರ್ಲಿ 

ಚಿಕಿತ್ಸೆಯ ಜೊತೆಗೆ ಸಾಂತ್ವನ, ಕರ್ತವ್ಯದ ಜೊತೆಗೆ ಕಾಳಜಿ – ಇವೆಲ್ಲವೂ ಒಟ್ಟಾಗಿ ಕಾಣಿಸಿಕೊಂಡದ್ದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ

ಸರ್ಕಾರಿ ಆಸ್ಪತ್ರೆ ಎಂದರೆ ಭಯಪಡುವ ಮನಸ್ಥಿತಿ ನಮ್ಮಲ್ಲಿ ಹಲವರಲ್ಲಿದೆ. ಆದರೆ ಆ ಭಾವನೆಯನ್ನು ಸಂಪೂರ್ಣವಾಗಿ ಬದಲಿಸುವ ಅನುಭವ ನೀಡಿದ್ದು ಸುಳ್ಯ ಸರ್ಕಾರಿ ಆಸ್ಪತ್ರೆ.
ಸುಮಾರು 20 ದಿನಗಳ ಹಿಂದೆ, ನನ್ನ 9 ವರ್ಷದ ಮಗನಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ನಾವು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತೆರಳಿದೆವು. ತಕ್ಷಣ ಪರೀಕ್ಷಿಸಿದ ಮಕ್ಕಳ ವೈದ್ಯೆ ಡಾ. ರಜನಿ ಅವರು ಯಾವುದೇ ವಿಳಂಬವಿಲ್ಲದೆ ಮಗನನ್ನು ICU ಗೆ ದಾಖಲಿಸುವಂತೆ ಸೂಚಿಸಿದರು. ಆ ಕ್ಷಣದ ಆತಂಕ ಅತೀವವಾದರೂ, ಅಲ್ಲಿಂದ ಆರಂಭವಾದ ಆರೈಕೆ ನಮ್ಮ ಮನಸ್ಸಿಗೆ ಅಪಾರ ಧೈರ್ಯ ನೀಡಿತು.

ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯುವ ಅನಿವಾರ್ಯತೆ ಎದುರಾಯಿತು. ICU ಯಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಹಾಗೂ ವೃದ್ಧರು ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್‌ಗಳು ರೋಗಿಗಳೊಂದಿಗೆ ನಡೆಸಿದ ಮಾನವೀಯ ವರ್ತನೆ ನೋಡಿದಾಗ ನಿಜಕ್ಕೂ ಆಶ್ಚರ್ಯವಾಯಿತು. ಮಕ್ಕಳೊಂದಿಗೆ ಮಕ್ಕಳಂತೆ ಮಾತನಾಡುವ ಶೈಲಿ, ವೃದ್ಧರನ್ನು ತಮ್ಮದೇ ಕುಟುಂಬದವರಂತೆ ಆರೈಕೆ ಮಾಡುವ ಮನೋಭಾವ, ರೋಗಿಗಳ ಮನಸ್ಸಿಗೆ ಧೈರ್ಯ ತುಂಬುವ ನಗುಮುಖ—ಇವು ಯಾವ ಐಷಾರಾಮಿ ಖಾಸಗಿ ಆಸ್ಪತ್ರೆಯ ಸೇವೆಯನ್ನೂ ಮೀರಿಸುವಂತಿತ್ತು.

ಐದು ದಿನಗಳ ಚಿಕಿತ್ಸೆಯ ನಂತರ ಮಗನನ್ನು ಡಿಸ್ಚಾರ್ಜ್ ಮಾಡುವ ವೇಳೆ ವೈದ್ಯರು ನೀಡಿದ ಸಲಹೆಗಳು ಹಾಗೂ ಮಗನೊಂದಿಗೆ ಮಾತನಾಡಿದ ಆತ್ಮೀಯ ರೀತಿ ಹೃದಯ ತಟ್ಟಿತು.
ಮೂರು ದಿನಗಳ ಹಿಂದೆ ಮತ್ತೆ ಮಗನನ್ನು ICU ಗೆ ದಾಖಲಿಸಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ ಆಸ್ಪತ್ರೆಗೆ ಪ್ರವೇಶಿಸುತ್ತಿದ್ದಂತೆಯೇ ಅದೇ ನಗುಮುಖದ ದರ್ಶನ, ಅದೇ ಕಾಳಜಿ, ಮಗನೊಂದಿಗೆ ದಾದಿಯರ ಪರಿಚಿತ ಒಡನಾಟ—ಇವು ನಮಗೆ ಮತ್ತೊಮ್ಮೆ ಭರವಸೆಯನ್ನು ನೀಡಿದವು. ICU ಯಲ್ಲಿರುವ ಬಿಳಿ ವಸ್ತ್ರಧಾರಿ ನರ್ಸ್‌ಗಳ ನಗುಮುಖವನ್ನು ಕಂಡಾಗ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕಣ್ಣಲ್ಲೇ ಸಮಾಧಾನ ಮೂಡುತ್ತಿದ್ದ ದೃಶ್ಯ ಮರೆಯಲಾಗದು.

ಸರ್ಕಾರಿ ಆಸ್ಪತ್ರೆ ಎಂದರೆ ಭಯಪಡುವ ಪ್ರತಿಯೊಬ್ಬರೂ ಒಮ್ಮೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬರಲೇಬೇಕು. ಇಲ್ಲಿ ಚಿಕಿತ್ಸೆ ಮಾತ್ರವಲ್ಲ, ಮಾನವೀಯತೆ ಮತ್ತು ಭರವಸೆಯೂ ದೊರೆಯುತ್ತದೆ.

ಸುಳ್ಯ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ಮುಖ್ಯ ವೈದ್ಯರು, ಮಕ್ಕಳ ವೈದ್ಯೆ ಡಾ. ರಜನಿ ಅವರು, ಎಲ್ಲಾ ಸ್ಟಾಫ್ ನರ್ಸ್‌ಗಳು ಹಾಗೂ ಶುಚಿತ್ವದಲ್ಲಿ ಯಾವುದೇ ರಾಜಿ ಇಲ್ಲದೆ ಸೇವೆ ಸಲ್ಲಿಸುವ ಡಿ-ಗ್ರೂಪ್ ನೌಕರರಿಗೆ ಹೃದಯಪೂರ್ವಕ ಅನಂತ ಧನ್ಯವಾದಗಳು. ಬಡ ರೋಗಿಗಳ  ಸೇವೆಯನ್ನು ಇನ್ನೂ ಅನೇಕ ವರ್ಷಗಳ ಕಾಲ ಮುಂದುವರಿಸಲು ಸೃಷ್ಟಿಕರ್ತನು ನಿಮಗೆ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

ತಾಜುದ್ದೀನ್ ಟರ್ಲಿ