ಪುತ್ತೂರು, ಡಿ.31: ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ ಅವರ ಪುತ್ತೂರಿನ ನಿವಾಸದಲ್ಲಿ ಕಳವು ಯತ್ನ ನಡೆದ ಪ್ರಕರಣಕ್ಕೆ ಸಂಬಂಧಿಸಿ, ಪುರೋಹಿತ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅರ್ಚಕ ಹಾಗೂ ಆತನ ಪತ್ನಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ಮುಡೂರು ನಿವಾಸಿಗಳಾಗಿರುವ, ಪ್ರಸ್ತುತ ಪಂಜದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಎಂದು ಗುರುತಿಸಲಾಗಿದೆ.
ಡಿಸೆಂಬರ್ 17ರಂದು ಮಧ್ಯರಾತ್ರಿ ಆರೋಪಿಗಳು ನಾರಾಯಣ ಅವರ ಮನೆಗೆ ನುಗ್ಗಿ, ಅವರು ಹಾಗೂ ಅವರ ಪತ್ನಿಯನ್ನು ಬೆದರಿಸಿ ಚಿನ್ನಾಭರಣ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿದ್ದು, ಆತಂಕಗೊಂಡು ಜೋರಾಗಿ ಕೂಗಿದ್ದಾರೆ. ಅವರ ಕೂಗಿನಿಂದ ಭಯಗೊಂಡ ಆರೋಪಿಗಳು ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಯಾವುದೇ ವಸ್ತು ಕಳವು ಆಗಿಲ್ಲ.
ವೃದ್ಧ ದಂಪತಿಯ ಮನೆಗೆ ಕಳವು ಯತ್ನ ನಡೆದಿದೆ ಎಂದು ಎ.ವಿ. ನಾರಾಯಣ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು. ನಾರಾಯಣ ಅವರ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ವಾಸಿಸುತ್ತಿರುವುದನ್ನು ತಿಳಿದು ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಾಗೂ ಹೆಲ್ಮೆಟ್ ಧರಿಸಿ ಮನೆಗೆ ನುಗ್ಗಿದ್ದು, ವೃದ್ಧ ದಂಪತಿಯ ಕೂಗು-ಕಿರುಚಿನಿಂದ ಗಾಬರಿಗೊಂಡು ಕಳವು ಯತ್ನವನ್ನು ಅರ್ಧದಲ್ಲೇ ಬಿಟ್ಟು ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

