ಕೌಶಲ್ಯಾಭಿವೃದ್ಧಿಯೇ ಯಶಸ್ಸಿನ ಮಂತ್ರ : ಟಿ ಎಮ್ ಶಾಹೀದ್ ತೆಕ್ಕಿಲ್

ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜಮುಖಿ ಚಿಂತನೆಗಳ ಸುವರ್ಣ ಸಂಯೋಜನೆಯೊಂದಿಗೆ ಸುಳ್ಯದಲ್ಲಿ ಕೆ ಎ ನಾಲೆಜ್ ಸೆಂಟರ್‌ನ ಉದ್ಘಾಟನಾ ಸಮಾರಂಭ ಡಿಸೆಂಬರ್ 29ರಂದು ಅರ್ಥಪೂರ್ಣವಾಗಿ ನೆರವೇರಿತು. ಶೈಕ್ಷಣಿಕ ಕಾರ್ಯಗಾರಗಳ ಮೂಲಕ ಯುವ ಮನಸ್ಸುಗಳಿಗೆ ದಿಕ್ಕು ನೀಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಸಾಧಕರಿಗೆ ಗೌರವ ಸನ್ಮಾನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಘನತೆ ಹೆಚ್ಚಿಸಲಾಯಿತು. ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳ ಸಂಗಮವಾಗಿದ ಈ ಸಮಾರಂಭವು ಭವಿಷ್ಯದ ಶಕ್ತಿಶಾಲಿ ಸಮಾಜ ನಿರ್ಮಾಣದತ್ತ ಒಂದು ಮಹತ್ವದ ಹೆಜ್ಜೆಯಾಗಿ ಮೂಡಲಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹೀದ್ ಅವರು, “ಆಧುನಿಕ ತಂತ್ರಜ್ಞಾನವು ಕ್ಷಿಪ್ರವಾಗಿ ಬದಲಾಗುತ್ತಿರುವ ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆ ಎ ನಾಲೆಜ್ ಸೆಂಟರ್ ಯುವಜನರಿಗೆ ಕೌಶಲ್ಯಾಭಿವೃದ್ಧಿ, ಉದ್ಯೋಗೋನ್ಮುಖ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮಾರ್ಗದರ್ಶನ ನೀಡುವ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿ” ಎಂದು ಆಶಿಸಿದರು.
ಕೆವಿಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ವಿ. ಲೀಲಾಧರ್ ಅವರು ಶೈಕ್ಷಣಿಕ ಕ್ಷೇತ್ರದ ವಿವಿಧ ಆಯಾಮಗಳನ್ನು ಸ್ಪರ್ಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಲಭ್ಯವಿರುವ ಉನ್ನತ ಶಿಕ್ಷಣ ಹಾಗೂ ವೃತ್ತಿ ಅವಕಾಶಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಟಿ.ಎಂ. ಶಾಹೀದ್, ಡಾ. ಕೆ.ವಿ. ಲೀಲಾಧರ್, ಹನೀಫ್ ಪುತ್ತೂರು, ಹಮೀದ್ ಕುತ್ತಮೊಟ್ಟೆ, ಅಡ್ವೊಕೇಟ್ ಅಬೂಬಕರ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ವೈದ್ಯಕೀಯ, ಕಾನೂನು ಸೇರಿದಂತೆ ವಿವಿಧ ಉನ್ನತ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೇವಾರಂಗಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿ ಸಾಧಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸೌಮ್ಯ ಬೆಂಗಳೂರು, ಅಬ್ದುಲ್ ಮಜೀದ್ ಹಾಜಿ ಜನತಾ, ಲತೀಫ್ ಹರ್ಲಡ್ಕ, ಹಮೀದ್ ಬೀಜಕೊಚ್ಚಿ, ಇಮ್ತಿಯಾಝ್ (ಕಮ್ಯುನಿಟಿ ಸೆಂಟರ್), ಉಮ್ಮತ್ ಒನ್ ಕೊಡಗು ಖಾಲಿದ್, ಬಾತಿಶಾ ಸುಣ್ಣಮೂಲೆ, ಇಕ್ಬಾಲ್ ಎಲಿಮಲೆ, ಶಾಫಿ ಕುತ್ತಮೊಟ್ಟೆ, ಸಿದ್ದೀಕ್ ಕಟ್ಟೆಕಾರ್, ಅಬ್ದುಲ್ ಹಮೀದ್ ಜನತಾ, ಮುಹಮ್ಮದ್ ಕೆ.ಎಂ.ಎಸ್, ಹಮೀದ್ ಸುಣ್ಣಮೂಲೆ, ಅಡ್ವೊಕೇಟ್ ಮೂಸ ಪೈಂಬಚ್ಚಾಲ್, ಆಶಾ ಮೇಡಂ, ಅಡ್ವೊಕೇಟ್ ರಾಬಿಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಒತ್ತು ನೀಡಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಹೊಸ ಆಶಾವಾದ ಹಾಗೂ ಪ್ರೇರಣೆಯನ್ನು ಮೂಡಿಸಿತು.

