ಸುಳ್ಯ ಪಿಎಲ್‌ಡಿ ಬ್ಯಾಂಕ್‌ನಲ್ಲಿ ನಿಯಮ ಉಲ್ಲಂಘನೆ ಆರೋಪ : ನಿರ್ದೇಶಕರ ದೂರಿನ ಹಿನ್ನೆಲೆ ಮೇ 21ರಂದು ಸತ್ಯಾಸತ್ಯತೆ ಪರಿಶೀಲನೆ
ಸುಳ್ಯ: ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಸಂಸ್ಥೆಯ ಆಡಳಿತ ಮತ್ತು ಸಾಲ ವಿತರಣೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಆಗಿದೆ ಎಂದು ಗಂಭೀರ ಆರೋಪ ಮಾಡಿ ಬ್ಯಾಂಕಿನ ನಿರ್ದೇಶಕರಾದ ಜ್ಞಾನೇಶ್ವರ ಶೇಟ್ ಹಾಗೂ ಧರ್ಮಪಾಲ ಕೊಯಿಂಗಾಜೆ ಅವರು ಮಂಗಳೂರಿನ ಸಹಕಾರಿ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ದೂರು ಸಲ್ಲಿಸಿದ್ದರು ದೂರಿನ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಮೇ 21 ರಂದು ಸಹಕಾರಿ ಸಂಘಗಳ ಇಲಾಖೆ ತನಿಖಾ ಪ್ರಕ್ರಿಯೆ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ
“ಬ್ಯಾಂಕಿನ ನಿರ್ದೇಶಕರು ನೀಡಿದ ದೂರಿನಲ್ಲಿ ಏನು ಆರೋಪಿಸಲಾಗಿದೆ?”
ಬ್ಯಾಂಕಿನ ನಿರ್ದೇಶಕರಾದ ಜ್ಞಾನೇಶ್ವರ ಶೇಟ್ ಹಾಗೂ ಧರ್ಮಪಾಲ ಕೊಯಿಂಗಾಜೆ ಅವರು ಮಂಗಳೂರಿನ ಸಹಕಾರಿ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ದೂರು ಸಲ್ಲಿಸಿದ್ದರು.
ದೂರಿನಲ್ಲಿ ಬ್ಯಾಂಕಿನ ಸಿಬ್ಬಂದಿಗಳಿಗೆ ಬೈಲಾದಲ್ಲಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ವಿತರಿಸಿರುವುದು, ಸಿಬ್ಬಂದಿ ವೇತನ ಸಾಲದ ಬೈಲಾ ತಿದ್ದುಪಡಿ ವಿಷಯವನ್ನು ನಿರ್ದೇಶಕರಿಗೆ ತಿಳಿಸದೇ ಕ್ರಮ ಕೈಗೊಂಡಿರುವುದು, ಸಂಘದ ಸ್ವಂತ ನಿಧಿಯಿಂದ ಕೆಲ ಸದಸ್ಯರಿಗೆ 12 ಶೇಕಡಾ ಬಡ್ಡಿದರದಲ್ಲಿ ಸಾಲ ವಿತರಿಸಿ ಬಳಿಕ ಅದೇ ಸದಸ್ಯರನ್ನು ನಬಾರ್ಡ್‌ನ 3 ಶೇಕಡಾ ಬಡ್ಡಿ ಯೋಜನೆಗೆ ವರ್ಗಾಯಿಸಿ ಬ್ಯಾಂಕ್ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಆರೋಪ ಮಾಡಲಾಗಿದೆ.
ಇದಲ್ಲದೆ, ಬ್ಯಾಂಕಿನ ನಿರ್ದೇಶಕರೊಬ್ಬರ ಮಗನಿಗೆ ಬ್ಯಾಂಕಿನ ಕೊಠಡಿಯನ್ನು ವಾಸ್ತವ್ಯದ ಉದ್ದೇಶಕ್ಕೆ ಬಾಡಿಗೆಗೆ ನೀಡಿರುವುದು, ಈ ಹಿನ್ನೆಲೆಯಲ್ಲಿ ಸಂಬಂಧಿತ ನಿರ್ದೇಶಕರ ಸ್ಥಾನ ರದ್ದುಪಡಿಸುವ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.
ಬ್ಯಾಂಕಿನ ವಾಣಿಜ್ಯ ಕಟ್ಟಡವನ್ನು ವಾಸ್ತವ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡಿ, ಗೃಹ ಬಳಕೆಯ ರೀತಿಯಲ್ಲಿ ವಿದ್ಯುತ್ ಬಳಸಿರುವ ಬಗ್ಗೆ ಮೆಸ್ಕಾಂ ಜಾಗೃತ ದಳ ದಾಳಿ ನಡೆಸಿ ಅಕ್ರಮ ದೃಢಪಡಿಸಿ ದಂಡ ವಿಧಿಸಿದ್ದು, ಆ ದಂಡವನ್ನು ಬ್ಯಾಂಕ್‌ನಿಂದಲೇ ಪಾವತಿಸಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ, ನಿರ್ದೇಶಕರು ಕೇಳಿದ ಬ್ಯಾಂಕ್ ದಾಖಲೆಗಳನ್ನು ನೀಡದೇ ಸತಾಯಿಸಿರುವುದು ಹಾಗೂ ಇಬ್ಬರು ನಿರ್ದೇಶಕರಿಗೆ ನಿಗದಿತ ಮಿತಿಗಿಂತ ಹೆಚ್ಚಿನ ಸಾಲ ವಿತರಿಸಿರುವ ಆರೋಪಗಳನ್ನೂ ದಾಖಲಿಸಲಾಗಿದೆ.
ಈ ಸಂಬಂಧ 03/03/2026 ಹಾಗೂ 06/03/2026ರಂದು ಬ್ಯಾಂಕಿನ ವ್ಯವಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರ ಮುಂದೆ ಎದುರುದಾರರು ಕೇವಲ ಒಂದು ಬಾರಿ ಮಾತ್ರ ಹಾಜರಾಗಿದ್ದು, ನಂತರ ದೂರು ಅರ್ಜಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದರೂ ವಿಚಾರಣೆಗೆ ಪದೇಪದೇ ಗೈರಾಗಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನೆಲೆ, ಸಹಕಾರಿ ಸಂಘಗಳ ಸಹಾಯಕ ಉಪ ನಿಬಂಧಕರ ಕಚೇರಿ ಅವರಿಗೆ 21/03/2026ರಂದು ಸಮಗ್ರ ತನಿಖೆ ನಡೆಸಿ, ಆರೋಪಗಳು ಸತ್ಯವೆಂದು ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ವಿವರ ಹಾಗೂ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಲಾಗಿದೆ.
ಇದೀಗ 13/05/2026ರಂದು ಸಹಾಯಕ ನಿಬಂಧಕರು ಬ್ಯಾಂಕಿನ ವ್ಯವಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದು, 21/05/2026ರಂದು ಬೆಳಿಗ್ಗೆ 11 ಗಂಟೆಗೆ ಬ್ಯಾಂಕಿನ ಕಚೇರಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳು ಮತ್ತು ಪೂರಕ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.






m


Scroll To Top