ಕಾಸರಗೋಡು: ಬಾಡಿಗೆ ಮನೆಯಲ್ಲಿ ತಂದೆ ಹಾಗೂ ಪ್ಲಸ್‌ಟು ವಿದ್ಯಾರ್ಥಿನಿಯಾಗಿರುವ ಮಗಳು ಒಂದೇ ಫ್ಯಾನ್‌ನ ಕೊಕ್ಕೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಘಟನೆಯಿಂದ ಸ್ಥಳೀಯರು ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಘಾತ ಉಂಟಾಗಿದೆ. ಮೃತರನ್ನು ಕರ್ನಾಟಕ ಮೂಲದ ಗಣೇಶನ್ (55) ಹಾಗೂ ಕಾಸರಗೋಡು ಮೀಪುಗಿರಿ ನಿವಾಸಿ, ಪರವನಡುಕ್ಕಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವೈಷ್ಣವಿ (17) ಎಂದು ಗುರುತಿಸಲಾಗಿದೆ. ಚೆಮ್ಮನಾಡ್ ನ ಕೊಲಿಯಡುಕ್ಕಂನ ಶಿವಪುರಂ ದೇವಸ್ಥಾನದ ಸಮೀಪದ ಎರಡು ಅಂತಸ್ತಿನ ಬಾಡಿಗೆ ಮನೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಗಣೇಶನ್ ಅವರ ಪತ್ನಿ ಓಮನಾ ಹೋಂ ನರ್ಸ್ ಆಗಿದ್ದು, ಘಟನೆ ನಡೆದ ವೇಳೆ ಕೆಲಸಕ್ಕೆ ತೆರಳಿದ್ದರು. ಅವರ ಪುತ್ರ ವಿಷ್ಣು ಅಡುಗೆ ಕೆಲಸದಲ್ಲಿದ್ದರು ಎಂದು ತಿಳಿದುಬಂದಿದೆ.
ಭಾನುವಾರ ರಾತ್ರಿ ಸುಮಾರು 11.10ರ ವೇಳೆಗೆ ಗಣೇಶನ್ ಅವರು ನೆರೆಮನೆಯವರಿಗೆ ತೆರಳಿ ತಮ್ಮ ಮಗಳು ಕಾಣೆಯಾಗಿರುವುದಾಗಿ ತಿಳಿಸಿದ್ದರು. ಬಳಿಕ ಅವರು ಮನೆಗೆ ಹಿಂದಿರುಗಿದ ನಂತರ ಅವರ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಮೇಲ್ಪರಂಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಒಳಗಿನಿಂದ ಲಾಕ್ ಆಗಿದ್ದ ಮನೆಯ ಬಾಗಿಲನ್ನು ಬಲವಂತವಾಗಿ ತೆರೆದಿದ್ದಾರೆ. ಈ ವೇಳೆ ಮಲಗುವ ಕೋಣೆಯಲ್ಲಿ ತಂದೆ–ಮಗಳು ಒಂದೇ ಫ್ಯಾನ್‌ನ ಕೊಕ್ಕೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲಿಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೇಲ್ಪರಂಬ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





m
