ಇತರೆ

ರಾಮಕುಂಜ : ಗುರುಪ್ರಸಾದ್‌ರ ಅಕಾಲಿಕ ನಿಧನ: ಮಿಲಾದ್ ಕಾರ್ಯಕ್ರಮ ಮುಂದೂಡಿ ಸೌಹಾರ್ದತೆ ಮೆರೆದ ಮಸೀದಿ ಆಡಳಿತ..!!

ರಾಮಕುಂಜ: ಕೊಯಿಲ ಗ್ರಾಮದ ಕುದುಲೂರು ನಿವಾಸಿ ಹಾಗೂ ರಿಕ್ಷಾ ಚಾಲಕರಾಗಿದ್ದ ಗುರುಪ್ರಸಾದ್ (35) ಅವರು ಆ.22ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಗೋಳಿತ್ತಡಿ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಪ್ರಸಾದ್ ಅವರು ಸಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿದಿನ ರಿಕ್ಷಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಆ.22ರಂದು ಶಾಲೆಗೆ ಮಕ್ಕಳನ್ನು ಕರೆತರಲು ಮನೆಯಿಂದ ಹೊರಡುವ ಸಂದರ್ಭದಲ್ಲಿ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತು.
ತಕ್ಷಣ ಅವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಮಿಲಾದ್ ಕಾರ್ಯಕ್ರಮ ಮುಂದೂಡಿಕೆ

ಗುರುಪ್ರಸಾದ್ ಅವರ ಮನೆ ಕುದುಲೂರು ಮುಬಾರಕ್ ಜುಮಾ ಮಸೀದಿ ಸಮೀಪದಲ್ಲಿದ್ದು, ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಆ.22ರಂದು ಮಸೀದಿಯಲ್ಲಿ ಮಿಲಾದ್ ನಬಿ ಪ್ರಯುಕ್ತ ನಡೆಯಬೇಕಿದ್ದ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಮುಂದೂಡಲಾಯಿತು. ಮೃತರ ಕುಟುಂಬದ ದುಃಖದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ಮಸೀದಿ ಆಡಳಿತ ಮಂಡಳಿ ಸೌಹಾರ್ದತೆ ಹಾಗೂ ಮಾನವೀಯತೆಯನ್ನು ಮೆರೆದಿದೆ.
m