ಇತರೆ

ಅರಂಬೂರು: ಅಲ್ ಅಮೀನ್ ಯೂತ್ ಫೆಡರೇಷನ್ : ಸದಸ್ಯರಿಗೊಂದು ಸಸಿ : 15ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಪರಿಸರ ಸ್ನೇಹಿ ಅಭಿಯಾನ

ಸದಸ್ಯರ ಮನೆಗಳ ಆವರಣದಲ್ಲಿ ಹಸಿರು ವಾತಾವರಣ ಬೆಳೆಸುವುದರ ಜೊತೆಗೆ, ಪರಿಸರ ಸಂರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅರಂಬೂರು: ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಸ್ಪಟಿಕ ಮಹೋತ್ಸವದ (15ನೇ ವರ್ಷದ ಆಚರಣೆ) ಪ್ರಯುಕ್ತ  ಸಂಸ್ಥೆಯ 15 ವರ್ಷಗಳ ಯಶಸ್ವಿ ಪಯಣದ ಸವಿನೆನಪಿಗಾಗಿ (2011–2026) ‘ಸದಸ್ಯರಿಗೊಂದು ಸಸಿ’ ಎಂಬ ವಿನೂತನ ಹಾಗೂ ಪರಿಸರ ಸ್ನೇಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರಿಗೂ ಉತ್ತಮ ತಳಿಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.

ಸಂಸ್ಥೆಯು 15 ವರ್ಷಗಳನ್ನು ಪೂರೈಸಿದ ಈ ಶುಭ ಸಂದರ್ಭದಲ್ಲಿ, ಪ್ರತಿಯೊಬ್ಬ ಸದಸ್ಯರ ಮನೆಯಲ್ಲೂ ಈ ಸಂಭ್ರಮದ ನೆನಪು ಸದಾ ಹಸಿರಾಗಿರಬೇಕು ಎಂಬ ಆಶಯದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸದಸ್ಯರು ನೆಡುವ ಸಸಿ ಬೆಳೆದು ಮರವಾಗಿ ಸಿಹಿ ಫಲ ನೀಡುವ ಸಂದರ್ಭದಲ್ಲಿ, ‘ಇದು ನಮ್ಮ ಸಂಸ್ಥೆಯ 15ನೇ ವಾರ್ಷಿಕೋತ್ಸವದಂದು ನೆಟ್ಟ ಸಸಿ’ ಎಂಬ ನೆನಪು, ಹೆಮ್ಮೆ ಹಾಗೂ ಸಂತಸ ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸಸಿ ವಿತರಣೆಯೊಂದಿಗೆ, ಸಸಿಯನ್ನು ಸೂಕ್ತ ರೀತಿಯಲ್ಲಿ ನೆಟ್ಟು ಉತ್ತಮವಾಗಿ ಬೆಳೆಸಲು ಅಗತ್ಯವಿರುವ ಸರಳ ಮಾರ್ಗದರ್ಶನ ಕೈಪಿಡಿಯನ್ನೂ ಪ್ರತಿಯೊಬ್ಬ ಸದಸ್ಯರಿಗೆ ನೀಡಲಾಯಿತು. ಕೈಪಿಡಿಯಲ್ಲಿ ಸಸಿ ನೆಡುವ ಸರಿಯಾದ ವಿಧಾನ, ಗೊಬ್ಬರದ ಬಳಕೆ ಹಾಗೂ ನೀರಿನ ನಿರ್ವಹಣೆ ಸೇರಿದಂತೆ ಸಸಿಯ ಪಾಲನೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದೆ.
ಈ ಪರಿಸರ ಸ್ನೇಹಿ ಯೋಜನೆಯ ಯಶಸ್ವಿ ಅನುಷ್ಠಾನದ ಜವಾಬ್ದಾರಿಯನ್ನು ಸಂಸ್ಥೆಯು ರಶೀದ್ ಮಾಂಬ್ಲಿ ಹಾಗೂ ಕಬೀರ್ ಪನ್ನೆ ಅವರಿಗೆ ವಹಿಸಿತ್ತು.

ಸದಸ್ಯರ ಮನೆಗಳ ಆವರಣದಲ್ಲಿ ಹಸಿರು ವಾತಾವರಣ ಬೆಳೆಸುವುದರ ಜೊತೆಗೆ, ಪರಿಸರ ಸಂರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

m