ಸುಳ್ಯ: ಜಟ್ಟಿಪಳ್ಳ ಪುಟಾಣಿ ಮದರಸ ವಿದ್ಯಾರ್ಥಿಗಳ ಬಹುನಿರೀಕ್ಷಿತ ಸ್ಮಾರ್ಟ್ ಕ್ಲಾಸ್‌ರೂಮ್ ಇಂದು ಲೋಕಾರ್ಪಣೆ
ಸುಳ್ಯ, ಜಟ್ಟಿಪಳ್ಳ: ಜಟ್ಟಿಪಳ್ಳ ಹಯಾತ್ತುಲ್ ಇಸ್ಲಾಂ ಕಮಿಟಿಯ ಅಧೀನದಲ್ಲಿ ಸುಮಾರು 28 ವರ್ಷಗಳನ್ನು ಪೂರೈಸಿ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬುಸ್ತಾನುಲ್ ಊಲೂಮ್ ಮದರಸದಲ್ಲಿನ ಪುಟಾಣಿ ವಿದ್ಯಾರ್ಥಿಗಳ ಬಹುನಿರೀಕ್ಷಿತ ಸ್ಮಾರ್ಟ್ ಕ್ಲಾಸ್‌ರೂಮ್ ಇಂದು (ಆಗಸ್ಟ್ 24, ಸೋಮವಾರ) ಲೋಕಾರ್ಪಣೆಗೊಳ್ಳಲಿದೆ.
ಜಟ್ಟಿಪಳ್ಳ ಪರಿಸರದ ಊರಿನ ಸಮುದಾಯ ಬಾಂಧವರ ಸಹಕಾರದಿಂದ ಒಂದು ಲಕ್ಷಕ್ಕೂ ಅಧಿಕ ಅಂದಾಜು ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶ ಹೊಂದಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಪಾಠಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ಸ್ಮಾರ್ಟ್ ಕ್ಲಾಸ್‌ರೂಮ್ ಸೌಲಭ್ಯದಿಂದ ಮದರಸ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ತಾಂತ್ರಿಕ ಜ್ಞಾನವನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶ ದೊರೆಯಲಿದೆ. ದೃಶ್ಯ-ಶ್ರವ್ಯ ಮಾಧ್ಯಮಗಳ ಮೂಲಕ ಪಾಠ ಬೋಧನೆ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಲು ಸಹಕಾರಿಯಾಗಲಿದೆ.
ಮದರಸ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಈ ಸ್ಮಾರ್ಟ್ ಕ್ಲಾಸ್‌ರೂಮ್ ಸಜ್ಜಾಗಲು ಮದರಸ ಅಧ್ಯಾಪಕರಾದ ಲತೀಫ್ ಸಖಾಫಿ ಗೂನ್ನಡ್ಕ ಹಾಗೂ ಸಿರಾಜ್ ಸಹದಿ ಅಲೆಕ್ಕಾಡಿ ಪ್ರಮುಖವಾಗಿ ಕಾರಣಕರ್ತರಾಗಿದ್ದಾರೆ.
1501ನೇ ಮೀಲಾದ್ ಆಚರಣೆಯ ಸುಧಿನದಂದು ಸ್ಮಾರ್ಟ್ ಕ್ಲಾಸ್‌ರೂಮ್ ಉದ್ಘಾಟನೆಗೊಳ್ಳಲಿದೆ. ಜಟ್ಟಿಪಳ್ಳ ಮದರಸದಲ್ಲಿ ವರ್ಷಂಪ್ರತಿ ನಡೆಯುವ ಮೀಲಾದ್ ಸಂಗಮದ ಅಂಗವಾಗಿ ಇಂದು ಸಂಜೆ 4 ಗಂಟೆಗೆ ಮೌಲಿದ್ ಪಾರಾಯಣ ನಡೆಯಲಿದ್ದು, ಬಳಿಕ ಬಹು. ಕುಂಞಕೊಯ ತಂಙಳ್ ಸಹದಿ ಅವರು ಸ್ಮಾರ್ಟ್ ಕ್ಲಾಸ್‌ರೂಮ್ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎನ್.ಎ. ಅಬ್ಬುಲ್ಲಾ, ಗೌರವಾಧ್ಯಕ್ಷ ಅಬ್ಬೂಬಕ್ಕರ್ ಕೆ.ಎ., ಪ್ರಧಾನ ಕಾರ್ಯದರ್ಶಿ ಫೈಝಲ್, ಮದರಸ ಅಧ್ಯಾಪಕರಾದ ಲತೀಫ್ ಸಖಾಫಿ ಗೂನ್ನಡ್ಕ, ಸಿರಾಜ್ ಸಹದಿ ಅಲೆಕ್ಕಾಡಿ ಸೇರಿದಂತೆ ಸಮಿತಿಯ ಮಾಜಿ ಅಧ್ಯಕ್ಷರುಗಳು, ಪ್ರಸ್ತುತ ಸಮಿತಿ ಸದಸ್ಯರು, ಪೋಷಕರು ಹಾಗೂ ಸ್ಥಳೀಯರು ಉಪಸ್ಥಿತರಿರಲಿದ್ದಾರೆ.






m


Scroll To Top