ಸುಳ್ಯ : ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ನೂತನ ಅಧ್ಯಕ್ಷರ ಸರಳ ನಡೆಗೆ ಮೆಚ್ಚುಗೆ
ಸುಳ್ಯ: ಸುಮಾರು 60 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದ ಬಡ ಹಾಗೂ ಹಿಂದುಳಿದ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಉನ್ನತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ವಿವಿಧ ಕಲ್ಯಾಣ ಕಾರ್ಯಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಸ್ಥಾಪಿಸಲಾಯಿತು.
ಸಮುದಾಯದ ಶೈಕ್ಷಣಿಕ ಪ್ರಗತಿ, ಸಾಮಾಜಿಕ ಕಲ್ಯಾಣ ಹಾಗೂ ಅಗತ್ಯವಿರುವವರಿಗೆ ನೆರವು ನೀಡುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಪ್ರಸ್ತುತ ಸುಳ್ಯದ ಗಾಂಧಿನಗರದಲ್ಲಿ ತನ್ನದೇ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕಳೆದ ಆರು ದಶಕಗಳಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವುದು ಸಂಸ್ಥೆಯ ವಿಶೇಷತೆಯಾಗಿದೆ.
ಈ ನಡುವೆ ಸಂಸ್ಥೆಯ ನೂತನ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಅವರ ಸರಳ ಹಾಗೂ ಮಾದರಿ ನಡೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರತಿದಿನ ಸಂಸ್ಥೆಯ ಕಚೇರಿಗೆ ಆಗಮಿಸುತ್ತಿರುವ ಅವರು, ಕಚೇರಿಯ ಶುಚಿತ್ವಕ್ಕೆ ಸ್ವತಃ ಆದ್ಯತೆ ನೀಡುತ್ತಿದ್ದಾರೆ.ಹಳೆಯ ಕಡತಗಳನ್ನು ಪರಿಶೀಲಿಸಿ, ಅವುಗಳ ಮೇಲಿದ್ದ ಧೂಳು ಹಾಗೂ ಕಸವನ್ನು ಸ್ವಚ್ಛಗೊಳಿಸಿ, ಕಡತಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕಾರ್ಯವನ್ನು ಸ್ವತಃ ಮಾಡುತ್ತಿದ್ದಾರೆ. ಅಲ್ಲದೆ, ಕಚೇರಿ ಕಟ್ಟಡದಲ್ಲಿರುವ ಕೊಠಡಿಗಳ ಬಾಡಿಗೆದಾರರನ್ನು ಭೇಟಿಯಾಗಿ ಅವರ ವ್ಯಾಪಾರ ಹಾಗೂ ಯೋಗಕ್ಷೇಮ ವಿಚಾರಿಸಿ ಬಳಿಕ ನಿರ್ಗಮಿಸುತ್ತಿರುವುದು ಅವರ ಸರಳತೆ ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಇದಷ್ಟೇ ಅಲ್ಲದೆ, ಸಂಸ್ಥೆಗಾಗಿ ಹಿಂದೆ ದುಡಿದ ಹಿರಿಯ ವ್ಯಕ್ತಿಗಳನ್ನು ಗುರುತಿಸಿ, ಅವರ ಮನೆಗಳಿಗೆ ತೆರಳಿ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿ, ಸಂಸ್ಥೆಯ ಹಿಂದಿನ ಕಾರ್ಯವೈಖರಿ ಮತ್ತು ಅನುಭವಗಳನ್ನು ಆಲಿಸುತ್ತಿದ್ದಾರೆ. ಹಿರಿಯರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಅನುಭವಗಳನ್ನು ಗೌರವಿಸುವ ಮೂಲಕ ಸಂಸ್ಥೆಯ ಹಿಂದಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ಸಂಸ್ಥೆಯ ಸುಮಾರು 57 ವರ್ಷಗಳ ಹಿಂದಿನ ಅಧ್ಯಕ್ಷರಾಗಿದ್ದ ನಾವೂರು ನಿವಾಸಿ ಹಾಜಿ ಸಿ. ಅಬ್ದುಲ್ ಖಾದರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಕೆ.ಬಿ. ಇಬ್ರಾಹಿಂ, ಅವರ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಹಾಜಿ ಸಿ. ಅಬ್ದುಲ್ ಖಾದರ್ ಅವರನ್ನು ಆತ್ಮೀಯವಾಗಿ ತಮ್ಮ ಹತ್ತಿರ ಕುಳ್ಳಿರಿಸಿಕೊಂಡು, ಸುಮಾರು 57 ವರ್ಷಗಳ ಹಿಂದಿನ ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ತಮ್ಮ ಅನುಭವಗಳನ್ನು ಮೆಲುಕು ಹಾಕುವಂತೆ ಮಾಡಿದರು. ಸಂಸ್ಥೆಯ ಇತಿಹಾಸ, ಹಿರಿಯರ ಅನುಭವ ಹಾಗೂ ಪ್ರಸ್ತುತ ಕಾರ್ಯಚಟುವಟಿಕೆಗಳನ್ನು ಒಟ್ಟುಗೂಡಿಸಿಕೊಂಡು ಮುನ್ನಡೆಯುವ ನೂತನ ಅಧ್ಯಕ್ಷರ ಈ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಅಧಿಕಾರದ ಸ್ಥಾನಕ್ಕಿಂತ ಸೇವೆಗೆ ಆದ್ಯತೆ ನೀಡುವ ಸರಳ ನಡೆ ಸಂಸ್ಥೆಯ ಇತರ ಪದಾಧಿಕಾರಿಗಳಿಗೂ ಮಾದರಿಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.






m


Scroll To Top