ಇತರೆ

ಸುಳ್ಯ : ಜಟ್ಟಿಪಳ್ಳ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಧರ್ಮ, ಪ್ರೀತಿ ಮತ್ತು ಕರುಣೆಯ ಸಂದೇಶ ಸಾರಿದ ಶ್ರೀಕೃಷ್ಣನ ಸ್ಮರಣೆ

ಸುಳ್ಯ: ಧರ್ಮ, ಪ್ರೀತಿ, ಕರುಣೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಕಪಿಲ ಯುವಕ ಮಂಡಲ, ಮಾನಸ ಮಹಿಳಾ ಮಂಡಲ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಸೆ. 6ರಂದು ಜಟ್ಟಿಪಳ್ಳ ಶಾಲಾ ವಠಾರದಲ್ಲಿ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ಸತೀಶ್ ಕಾನತ್ತಿಲ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಘುನಾಥ್ ಜಟ್ಟಿಪಳ್ಳ, “ಹಲವಾರು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಊರಿನ ಹಿರಿಯರು, ಕಿರಿಯರು ಸೇರಿದಂತೆ ಎಲ್ಲರ ಸಹಕಾರ ಅತ್ಯಂತ ಮಹತ್ವದ್ದಾಗಿದೆ” ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರಲೇಖ ಮಡಪ್ಪಾಡಿ, ಹರೀಶ್ಚಂದ್ರ ಎಂ.ಆರ್., ದಿನೇಶ್ ಹಾಗೂ ರಶ್ಮಿ ಸೂರ್ತಿಲ ಉಪಸ್ಥಿತರಿದ್ದರು.

ಶ್ರೀಕೃಷ್ಣನ ಬಾಲಲೀಲೆ, ಧರ್ಮನಿಷ್ಠೆ ಹಾಗೂ ಭಗವದ್ಗೀತೆಯ ಮೂಲಕ ನೀಡಿದ ಜೀವನ ಸಂದೇಶಗಳನ್ನು ಸ್ಮರಿಸುವುದರೊಂದಿಗೆ ದಿನವಿಡೀ ವಿವಿಧ ಮನರಂಜನಾ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಪಿಲ ಯುವಕ ಮಂಡಲದ ಅಧ್ಯಕ್ಷ ಬಾನುಪ್ರಕಾಶ್ ಬಿ.ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಪುರುಷೋತ್ತಮ ಕಟ್ಟೆಮನೆ, ಕೆ.ಆರ್. ಗೋಪಾಲಕೃಷ್ಣ, ಸರೋಜಿನಿ ಪೆಲ್ತಡ್ಕ, ರಾಮಚಂದ್ರ ಗೌಡ ಪೆಲ್ತಡ್ಕ, ಜಯರಾಮ್ ಬೊಳಿಯಮಜಲು ಹಾಗೂ ನಮಿತಾ ಹರ್ಲಡ್ಕ ಉಪಸ್ಥಿತರಿದ್ದರು.
ನಂತರ ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಯಿತು. ಧಾರ್ಮಿಕ ಭಾವನೆ, ಸಾಂಸ್ಕೃತಿಕ ಪರಂಪರೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರಿದ ಕಾರ್ಯಕ್ರಮವು ಸಂಭ್ರಮದಿಂದ ಸಂಪನ್ನಗೊಂಡಿತು.
m