Featured, ಇತರೆ, ಸ್ಥಳೀಯ

ಮರ್ಕಝ್‌ಗೆ ಮಲೇಶ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಭೇಟಿ

ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಜತೆ ವಿಶೇಷ ಮಾತುಕತೆ; ಶೈಕ್ಷಣಿಕ–ಸಾಮಾಜಿಕ ಸಹಕಾರಕ್ಕೆ ಒತ್ತು

ಕೋಝಿಕ್ಕೋಡ್: ಭಾರತ ಪ್ರವಾಸದಲ್ಲಿರುವ ಮಲೇಶ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಕೋಝಿಕ್ಕೋಡ್‌ನ ಕಾರಂದೂರು ಮರ್ಕಝ್‌ಗೆ ಭೇಟಿ ನೀಡಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದರು. ಜ್ಞಾನ, ಮಾನವೀಯತೆ ಮತ್ತು ಸಾಮಾಜಿಕ ಸಹಕಾರದ ಸೇತುವೆಯಂತಿದ್ದ ಈ ಭೇಟಿ ಮರ್ಕಝ್ ಆವರಣದಲ್ಲಿ ವಿಶೇಷ ಗಮನ ಸೆಳೆಯಿತು.

ಐದು ದಿನಗಳ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಕೋಝಿಕ್ಕೋಡ್‌ಗೆ ಆಗಮಿಸಿದ ಅನ್ವರ್ ಇಬ್ರಾಹಿಂ ಅವರನ್ನು ಸಂಜೆ 5.40ರ ಸುಮಾರಿಗೆ ಕಾರಂದೂರು ಮರ್ಕಝ್‌ನಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮರ್ಕಝ್ ವರ್ಕಿಂಗ್ ಜನರಲ್ ಸೆಕ್ರೆಟರಿ ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಹಾಗೂ ಸೆಕ್ರೆಟರಿ ಸಿ. ಮುಹಮ್ಮದ್ ಫೈಝಿ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಬಳಿಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರೊಂದಿಗೆ ಪ್ರಧಾನಿ ಅನ್ವರ್ ಇಬ್ರಾಹಿಂ ವಿಶೇಷ ಮಾತುಕತೆ ನಡೆಸಿದರು. ಮರ್ಕಝ್ ಹಾಗೂ ಮಲೇಶ್ಯಾದ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಶೈಕ್ಷಣಿಕ ವಿನಿಮಯ, ಶಿಕ್ಷಣ, ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳ ಸಹಕಾರ ಹಾಗೂ ಮಲೇಶ್ಯಾದಲ್ಲಿರುವ ಭಾರತೀಯ ಸಮುದಾಯದ ಕ್ಷೇಮಾಭಿವೃದ್ಧಿ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬಂದವು.

ಎಕ್ಸಲೆನ್ಸ್ ಅವಾರ್ಡ್ ಪ್ರದಾನ

ಮಾನವೀಯ ಸೇವೆ, ಸಾಮಾಜಿಕ ಸುಧಾರಣೆ ಹಾಗೂ ಶೈಕ್ಷಣಿಕ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿರುವ ಗಣ್ಯರನ್ನು ಗೌರವಿಸುವ ಉದ್ದೇಶದಿಂದ ಶೈಖ್ ಅಬೂಬಕರ್ ಫೌಂಡೇಶನ್ ಆಯೋಜಿಸಿದ್ದ ‘ಎಕ್ಸಲೆನ್ಸ್ ಅವಾರ್ಡ್’ ಅನ್ನು ಮರ್ಕಝ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ವೀಕಾರ ಸಮಾರಂಭದಲ್ಲಿ ಅನ್ವರ್ ಇಬ್ರಾಹಿಂ ಅವರಿಗೆ ಹಸ್ತಾಂತರಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಮಲೇಶ್ಯಾ ಸರ್ಕಾರದ ನೇತೃತ್ವದಲ್ಲಿ ನಡೆದ ಅಂತರರಾಷ್ಟ್ರೀಯ ಹದೀಸ್ ಪಠಣ ಸಮ್ಮೇಳನಗಳ ಗೌರವಾರ್ಥವಾಗಿ, ವಿಶ್ವಪ್ರಸಿದ್ಧ ಹದೀಸ್ ಗ್ರಂಥ ‘ಸ್ವಹೀಹುಲ್ ಬುಖಾರಿ’ಯ ಹಸ್ತಪ್ರತಿಯನ್ನು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಮಲೇಶ್ಯಾ ಪ್ರಧಾನಮಂತ್ರಿಗೆ ಗೌರವಪೂರ್ವಕವಾಗಿ ಉಡುಗೊರೆಯಾಗಿ ನೀಡಿದರು.

ಗ್ರ್ಯಾಂಡ್ ಮುಫ್ತಿಯವರ ಆತಿಥ್ಯದಲ್ಲಿ ಭೋಜನ

ಸ್ವೀಕಾರ ಸಮಾರಂಭದ ಬಳಿಕ ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೈಗಾರಿಕಾ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದ ಗ್ರ್ಯಾಂಡ್ ಮುಫ್ತಿಯವರ ರಾತ್ರಿ ಭೋಜನ ಕೂಟದಲ್ಲೂ ಅನ್ವರ್ ಇಬ್ರಾಹಿಂ ಪಾಲ್ಗೊಂಡರು. ಬಳಿಕ ರಾತ್ರಿ 9.30ರ ಸುಮಾರಿಗೆ ಕಾಂತಪುರಂ ಅವರೊಂದಿಗೆ ದಕ್ಷಿಣ ಭಾರತದ ಪ್ರಮುಖ ಆಧ್ಯಾತ್ಮಿಕ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಮಡವೂರ್ ಸಿ.ಎಂ. ವಲಿಯುಲ್ಲಾಹಿ ಮಖಾಮ್‌ಗೆ ಭೇಟಿ ನೀಡಿದರು.

ಎರಡನೇ ಬಾರಿ ಮರ್ಕಝ್ ಭೇಟಿ

ಗ್ರ್ಯಾಂಡ್ ಮುಫ್ತಿಯನ್ನು ಭೇಟಿಯಾಗಲು ಅನ್ವರ್ ಇಬ್ರಾಹಿಂ ಕೇರಳಕ್ಕೆ ಆಗಮಿಸುತ್ತಿರುವುದು ಇದು ಎರಡನೇ ಬಾರಿ. ಪ್ರಧಾನಮಂತ್ರಿಯಾಗುವ ಕೆಲವೇ ವಾರಗಳ ಮೊದಲು, 2022ರ ಸೆಪ್ಟೆಂಬರ್‌ನಲ್ಲಿ ಅವರು ಮೊದಲ ಬಾರಿಗೆ ಮರ್ಕಝ್‌ಗೆ ಭೇಟಿ ನೀಡಿದ್ದರು.

ಕಾಂತಪುರಂ ಅವರ ಆರು ದಶಕಗಳ ಸುದೀರ್ಘ ಹದೀಸ್ ಬೋಧನಾ ಸೇವೆಯನ್ನು ಗೌರವಿಸಿ, ಮಲೇಶ್ಯಾ ಸರ್ಕಾರವು 2023ರಲ್ಲಿ ಧಾರ್ಮಿಕ ಪಂಡಿತರಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ಹಿಜ್ರಾ ಪ್ರಶಸ್ತಿ’ ನೀಡಿ ಸನ್ಮಾನಿಸಿತ್ತು. ಇದೇ ಗೌರವದ ಮುಂದುವರಿದ ಸಾಂಸ್ಕೃತಿಕ–ಶೈಕ್ಷಣಿಕ ಸಂಬಂಧದ ಭಾಗವಾಗಿ 2023, 2024 ಮತ್ತು 2025ರಲ್ಲಿ ಕೌಲಾಲಂಪುರದಲ್ಲಿ ಕಾಂತಪುರಂ ಅವರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಹದೀಸ್ ಪಠಣ ಸಮ್ಮೇಳನಗಳನ್ನೂ ಆಯೋಜಿಸಲಾಗಿತ್ತು.
ಕೇರಳ ಪ್ರವಾಸವು ಭಾರತ–ಮಲೇಶ್ಯಾ ಬಾಂಧವ್ಯಕ್ಕೆ ಮತ್ತಷ್ಟು  ಶಕ್ತಿ ತುಂಬುತ್ತದೆ ವಾಣಿಜ್ಯ, ಪ್ರವಾಸೋದ್ಯಮ, ಹೂಡಿಕೆ, ಆರ್ಥಿಕ ಸಹಕಾರ, ಶಿಕ್ಷಣ ಹಾಗೂ ಸಂಪರ್ಕ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡಲಿದೆ ಎಂಬ ಆಶಯವನ್ನು ಅನ್ವರ್ ಇಬ್ರಾಹಿಂ ಅವರು ಕೇರಳಕ್ಕೆ ಆಗಮಿಸುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದರು.

ಗಣ್ಯರ ಉಪಸ್ಥಿತಿ

ಸ್ವಾಗತ, ಭೇಟಿ ಹಾಗೂ ಸ್ವೀಕಾರ ಸಮಾರಂಭದಲ್ಲಿ ರಾಜ್ಯ ಕೈಗಾರಿಕಾ ಸಚಿವ ಪಿ.ಕೆ. ಕುಞಾಲಿಕ್ಕುಟ್ಟಿ, ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಸಯ್ಯಿದ್ ಇಬ್ರಾಹಿಮುಲ್ ಖಲೀಲ್ ಅಲ್ ಬುಖಾರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸಿ. ಮುಹಮ್ಮದ್ ಫೈಝಿ, ವಿ.ಪಿ.ಎಂ. ಫೈಝಿ ವಿಲ್ಯಾಪ್ಪಳ್ಳಿ, ಪಾಣಕ್ಕಾಡ್ ಸಯ್ಯಿದ್ ಸಾದಿಖಲಿ ಶಿಹಾಬ್ ತಂಙಳ್, ಕುಟ್ಟೂರ್ ಅಬ್ದುರ್ರಹ್ಮಾನ್ ಹಾಜಿ, ಎ.ಪಿ. ಅಬ್ದುಲ್ ಕರೀಮ್ ಹಾಜಿ ಚಾಲಿಯಂ ಸೇರಿದಂತೆ ವಿವಿಧ ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಉಮರಾ ಪ್ರಮುಖರು ಉಪಸ್ಥಿತರಿದ್ದರು.