ಜಟ್ಟಿಪಳ್ಳ : JFL 10ನೇ ಆವೃತ್ತಿ ಫುಟ್ಬಾಲ್ ಪಂಧ್ಯಾಟ : ಪೆನಾಲ್ಟಿ ಶೂಟೌಟ್‌ನಲ್ಲಿ ಬಿಎಂಎ ಸ್ಟ್ರೈಕರ್ಸ್ ಚಾಂಪಿಯನ್
ಕ್ರೀಡೆಯೊಂದಿಗೆ ಜೀವನದ ಗುರಿಯೂ ಇರಲಿ : ನಝೀರ್ ಶಾಂತಿನಗರ
ಸುಳ್ಯ: ಜಟ್ಟಿಪಳ್ಳ ಸಿಟಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ 10ನೇ ಆವೃತ್ತಿಯ JFL ಫುಟ್ಬಾಲ್ ಲೀಗ್ ಪಂದ್ಯಾಟವು ಸೆ.20ರಂದು ಸುಳ್ಯದ ಡಿಗ್ರಿ ಕಾಲೇಜು ಮೈದಾನದಲ್ಲಿ ನಡೆಯಿತು.

ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು. ರೋಚಕವಾಗಿ ಸಾಗಿದ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಬಿಎಂಎ ಸ್ಟ್ರೈಕರ್ಸ್ ಹಾಗೂ ಸಾಗರ್ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾದವು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಾಗರ್ ಸ್ಟ್ರೈಕರ್ಸ್ ತಂಡವನ್ನು ಮಣಿಸಿದ ಬಿಎಂಎ ಸ್ಟ್ರೈಕರ್ಸ್, JFLನ 10ನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು

ಸಂಜೆ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಂತಿನಗರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಝೀರ್ ಶಾಂತಿನಗರ ಮಾತನಾಡಿ, ಕ್ರೀಡೆಯನ್ನು ಅಭ್ಯಾಸ ಮಾಡುವ ಹವ್ಯಾಸದೊಂದಿಗೆ ಜೀವನದಲ್ಲಿ ಭವಿಷ್ಯದ ಗುರಿಯನ್ನೂ ಹೊಂದಿರಬೇಕು. ಕ್ರೀಡೆಯ ಜತೆಗೆ ಗುರಿಯತ್ತ ನಿರಂತರ ಪ್ರಯತ್ನ ನಡೆಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ರಶೀದ್ ಜಟ್ಟಿಪಳ್ಳ, ಇಸ್ಮಾಯಿಲ್ ಎಸ್.ಎಂ., ರಫೀಕ್ ಬಿ.ಎಂ., ಪಂದ್ಯಗಳ ನಿರ್ಣಾಯಕರಾಗಿ ಸಹಕರಿಸಿದ ರವೂಫ್, ಪಂದ್ಯಾವಳಿಯ ಆಯೋಜಕರಾದ ಶಿಯಾಬ್ ಚಿನ್ನು, ನಾಸೀರ್ ಸಿ.ಎ., ಇಮ್ರಾನ್ ಅಮೈ, ಸಮದ್ ಅಮೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿಝಾರ್ ಟಾಲ್ಕ್ ಸ್ವಾಗತಿಸಿದರು. ನಿಸಾರ್ (ಉಚ್ಚೂರು) ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾವಳಿಯ ವೇಳೆ ನಿಸಾರ್ (ಉಚ್ಚೂರು) ಅವರು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ನೀಡಿದ ವೀಕ್ಷಕ ವಿವರಣೆ ಪ್ರೇಕ್ಷಕರನ್ನು ರಂಜಿಸಿತು.



Scroll To Top