ಮಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಮಂಗಳೂರು, ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿ ಭಾಗಗಳಿಗೆ ಮಹಾತ್ಮ ಗಾಂಧೀಜಿ ಭೇಟಿ ನೀಡಿ, ಇಲ್ಲಿನ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ಅವರ ಅಪಾರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲವಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಸ್ಮರಿಸಿದರು.

ನಗರದ ಕ್ಲಾಕ್ ಟವರ್ ಬಳಿಯ ರಾಜಾಜಿ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ಸರಳತೆ, ಅಹಿಂಸೆ, ಸತ್ಯ ಮತ್ತು ಮಾನವೀಯತೆಯ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು. ಇತ್ತೀಚಿನ ದಿನಗಳಲ್ಲಿ ಕೆಲವರು ಮಹಾತ್ಮ ಗಾಂಧೀಜಿಯವರ ದೇಶಕ್ಕೆ ನೀಡಿದ ಕೊಡುಗೆಯನ್ನು ಮರೆತು, ಅವರ ವಿರುದ್ಧ ಅಪಪ್ರಚಾರ ಹಾಗೂ ದೂಷಣೆ ಮಾಡುತ್ತಿರುವುದು ದುರದೃಷ್ಟಕರ. ಗಾಂಧೀಜಿಯವರ ಸಿದ್ಧಾಂತ ಮತ್ತು ತತ್ವಗಳನ್ನು ಶೇ.100ರಷ್ಟು ಪಾಲಿಸಲು ಸಾಧ್ಯವಾಗದಿದ್ದರೂ, ಅವರ ಬದುಕಿನ ಕನಿಷ್ಠ ಕೆಲವು ಆದರ್ಶಗಳನ್ನಾದರೂ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಗಾಂಧೀಜಿಯವರ ಜೀವನವೇ ಒಂದು ಸಂದೇಶ
ಸತ್ಯ, ಅಹಿಂಸೆ, ಸರಳ ಜೀವನ ಹಾಗೂ ಸರ್ವಧರ್ಮ ಸಮಾನತೆಯ ಮೂಲಕ ಮಹಾತ್ಮ ಗಾಂಧೀಜಿ ಜಗತ್ತಿಗೆ ಮಾದರಿಯಾದರು. ಅಧಿಕಾರ ಅಥವಾ ಸಂಪತ್ತಿಗಿಂತ ಜನರ ಒಳಿತನ್ನೇ ಮುಖ್ಯವಾಗಿಟ್ಟುಕೊಂಡ ಅವರ ಜೀವನ ಇಂದಿನ ಪೀಳಿಗೆಗೆ ವಿಶೇಷವಾಗಿ ಪ್ರೇರಣಾದಾಯಕವಾಗಿದೆ. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಗಾಂಧೀಜಿಯವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತಾದ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಬಿಡುಗಡೆಗೊಳಿಸಿದರೆ, ಕನ್ನಡ ಆವೃತ್ತಿಯನ್ನು ಟಿ.ಎಂ. ಶಾಹಿದ್ ತೆಕ್ಕಿಲ್ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಎಸಿಪಿ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.



