ಮಂಗಳೂರು, ಜೂನ್ 02: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ತಾತ್ಕಾಲಿಕವಾಗಿ ಬಂಧನ ಅಥವಾ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂಬಂತೆ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರೊಬ್ಬರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ. ಕಲ್ಲಡ್ಕ ಭಟ್ ಪರ ವಕೀಲ ಅರುಣ್ ಶ್ಯಾಂ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಎಫ್ಐಆರ್ ದಾಖಲಾಗಿದೆ:
ಮೇ 12ರಂದು ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ, ಕಲ್ಲಡ್ಕ ಭಟ್ ನೀಡಿದ ಭಾಷಣ ಪ್ರಚೋದನಾತ್ಮಕವಾಗಿದ್ದು, ಸಮಾಜದಲ್ಲಿ ಘರ್ಷಣೆ ಉಂಟುಮಾಡುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತ ನ್ಯಾಯ ಸಂಹಿತೆ (BNS) ಸೆಕ್ಷನ್ 353(2)ರಡಿ ಎಫ್ಐಆರ್ ದಾಖಲಾಗಿದೆ.
ಆರೋಪಗಳನ್ನು ಖಂಡಿಸಿರುವ ಕಲ್ಲಡ್ಕ ಭಟ್, ತಮ್ಮ ಮೇಲಿನ ಎಫ್ಐಆರ್ ರದ್ದುಪಡಿಸುವುದಕ್ಕಾಗಿ ಹೈಕೋರ್ಟ್ ಮೊರೆಹೋಗಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಜೂನ್ 10ರವರೆಗೆ ಯಾವುದೇ ಬಂಧನಾತ್ಮಕ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ.





m
