ನವದೆಹಲಿ, ಸೆಪ್ಟೆಂಬರ್ 9: ಭಾರತದ ನೂತನ ಉಪರಾಷ್ಟ್ರಪತಿಯಾಗಿ NDA ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಎನ್‌ಡಿಎ ನಾಮನಿರ್ದೇಶಿತರಾದ ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಸಿ.ಪಿ ರಾಧಾಕೃಷ್ಣನ್ ಅವರು ತಮ್ಮ ಪ್ರತಿಸ್ಪರ್ಧಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ 452 ಮತಗಳನ್ನು ಪಡೆಯುವ ಮೂಲಕ ಸ್ಪಷ್ಟವಾಗಿ ಗೆಲುವು ಸಾಧಿಸಿದ್ದಾರೆ. ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಪಡೆದಿದ್ದಾರೆ. ಇವರ ಗೆಲುವಿನ ಅಂತರ 152 ಮತಗಳು.
ಉಪರಾಷ್ಟ್ರಪತಿ ಚುನಾವಣೆ ಇಂದು ಮುಕ್ತಾಯಗೊಂಡಿತು. ಮೊದಲು NDA ಅಭ್ಯರ್ಥಿಯಾಗಿ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನು ಘೋಷಿಸಲಾಯಿತು. ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಮನವಿ ಮಾಡಿದ್ದರು. ಆದರೆ, ಇಂಡಿಯಾ ಬಣದ ಜಂಟಿ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿತ್ತು. ಉಪರಾಷ್ಟ್ರಪತಿ ಚುನಾವಣೆಗಳ ಮತದಾನ ಇಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಮತ ಎಣಿಕೆ ಕಾರ್ಯ ಶೀಘ್ರದಲ್ಲೇ ಆರಂಭವಾಯಿತು. ರಾಧಾಕೃಷ್ಣನ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ), ತೆಲುಗು ದೇಶಂ ಪಕ್ಷ (ಟಿಡಿಪಿ), ಜನತಾದಳ ಯುನೈಟೆಡ್ (ಜೆಡಿಯು), ಶಿವಸೇನೆ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಅಸ್ಸಾಂ ಗಣ ಪರಿಷತ್ (ಎಜಿಪಿ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ), ಜನತಾದಳ ಜಾತ್ಯತೀತ (ಜೆಡಿಎಸ್) ಮತ್ತು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸೇರಿದಂತೆ ಇತರರು ಬೆಂಬಲಿಸಿದರು. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಕೂಡ ರಾಧಾಕೃಷ್ಣನ್ ಪರವಾಗಿ ಮತ ಚಲಾಯಿಸಿತು.




m

