ಬೆಂಗಳೂರು: ಇಂದು ರೇಷನ್ ಕಾರ್ಡ್ ಸಾಮಾನ್ಯ ಕುಟುಂಬದ ಪ್ರಮುಖ ದಾಖಲೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ಹಿಡಿದು ಇತರ ಕಚೇರಿ ಕೆಲಸಗಳವರೆಗೆ ಇದರ ಪ್ರಾಮುಖ್ಯತೆ ಹೆಚ್ಚಿದೆ. ವಿಶೇಷವಾಗಿ ಬಿಪಿಎಲ್ ಕಾರ್ಡ್ (Below Poverty Line) ಹೊಂದಿರುವವರಿಗೆ ಸರ್ಕಾರದ ಅನೇಕ ಸೌಲಭ್ಯಗಳು ಲಭ್ಯವಾಗುತ್ತವೆ.
ಆದರೆ, ಅನರ್ಹರು ಬಿಪಿಎಲ್ ಕಾರ್ಡ್ ಪಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಇಂತಹ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯವನ್ನು ಕೈಗೊಂಡಿದೆ. ಈ ಕ್ರಮದ ಅಡಿಯಲ್ಲಿ ಹಲವು ಅನರ್ಹರ ಕಾರ್ಡ್‌ಗಳು ರದ್ದು ಆಗಿದ್ದು, ಅವರಿಗೆ ಎಪಿಎಲ್ ಕಾರ್ಡ್ ನೀಡಲಾಗಿದೆ. ಆದರೆ, ಅದರ ಮಧ್ಯೆ ಕೆಲ ನಿಜವಾದ ಅರ್ಹರ ಬಿಪಿಎಲ್ ಕಾರ್ಡ್‌ಗಳು ಸಹ ತಪ್ಪಾಗಿ ರದ್ದಾಗಿರುವ ಮಾಹಿತಿ ಹೊರಬಿದ್ದಿದೆ.
ಈ ಕುರಿತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, “ಅರ್ಹರಾಗಿದ್ದರೂ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾದವರಲ್ಲಿ ಗೊಂದಲ ಉಂಟಾಗಿದೆ. ಇಂತಹವರು ಸಂಬಂಧಿಸಿದ ತಾಲೂಕು ತಹಸೀಲ್ದಾರರನ್ನು ಸಂಪರ್ಕಿಸಿ ಮನವಿ ಸಲ್ಲಿಸಬಹುದು. ತಹಸೀಲ್ದಾರರು ಪರಿಶೀಲನೆ ನಡೆಸಿ, ಅರ್ಹರೆಂದು ದೃಢಪಟ್ಟರೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಈ ಹೊಸ ಕ್ರಮದಿಂದ ನಿಜವಾದ ಅರ್ಹ ಕುಟುಂಬಗಳಿಗೆ ಮತ್ತೆ ನ್ಯಾಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.





m
