Featured, ಇತರೆ, ಸ್ಥಳೀಯ

ಉಡುಪಿ: ಅಪ್ರಾಪ್ತೆಯೊಂದಿಗೆ ಲಾಡ್ಜ್‌ನಲ್ಲಿ ಪತ್ತೆಯಾದ ಬಿಜೆಪಿ ಮುಖಂಡನ ಪುತ್ರ – ಪೋಕ್ಸೊ ಪ್ರಕರಣ ದಾಖಲು

ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಯುವಕನೊಬ್ಬ ಲಾಡ್ಜ್‌ನಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಯುವಕನು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕಟಪಾಡಿಯ ಬಿಜೆಪಿ ಮುಖಂಡನ ಪುತ್ರ ಶ್ರೀಶಾಂತ್ ಪೂಜಾರಿ (20) ಎಂದು ಗುರುತಿಸಲಾಗಿದೆ.

ಮಾಹಿತಿ ಪ್ರಕಾರ, ಶ್ರೀಶಾಂತ್ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆಂದು ತಿಳಿದುಬಂದಿದೆ. ಬಾಲಕಿಯ ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಲಾಡ್ಜ್‌ನಲ್ಲಿ ದಾಖಲಾಗಿದ್ದಾನೆಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ತಿಳಿದ ಬಾಲಕಿಯ ಪೋಷಕರು ತಕ್ಷಣವೇ ಪೊಲೀಸರೊಂದಿಗೆ ಲಾಡ್ಜ್‌ಗೆ ದಾಳಿ ನಡೆಸಿ, ಇಬ್ಬರನ್ನು ಸ್ಥಳದಲ್ಲೇ ಪತ್ತೆಹಚ್ಚಿದ್ದಾರೆ. ಪ್ರಕರಣದ ತನಿಖೆ ಸಂದರ್ಭದಲ್ಲಿ ಮತ್ತೊಬ್ಬ ಬಾಲಕಿಯೂ ಮುಂದಾಗಿದ್ದು, “ಶ್ರೀಶಾಂತ್ ಮದುವೆ ಆಗುವುದಾಗಿ ನಂಬಿಸಿ ತಾನನ್ನೂ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ” ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Related Posts