Featured, ಅಂಕಣ, ಸ್ಥಳೀಯ

SDPI ದೊಡ್ಡಬಳ್ಳಾಪುರ ಕ್ಷೇತ್ರ ಸಮಿತಿ ವತಿಯಿಂದ 77 ನೇ ಗಣರಾಜ್ಯೋತ್ಸವ ದಿನಾಚರಣೆ

ಪ್ರಜಾಪ್ರಭುತ್ವ ಉಳಿಸಲು ಸಂವಿಧಾನ ರಕ್ಷಣೆಗಾಗಿ ಸಂಘಟಿತ ಹೋರಾಟ ಅಗತ್ಯ: SDPI

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಸಂಘಟಿತ ಜನಹೋರಾಟ ಅಗತ್ಯವಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮುಖಂಡರು ಅಭಿಪ್ರಾಯಪಟ್ಟರು.

SDPI ದೊಡ್ಡಬಳ್ಳಾಪುರ ಕ್ಷೇತ್ರ ಸಮಿತಿಯ ವತಿಯಿಂದ ಪಕ್ಷದ ಕಚೇರಿ ಎದುರು ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಮಾನವ ಗೌರವವನ್ನು ಭರವಸೆ ನೀಡಿದೆ ಎಂದರು. ಆದರೆ ಇಂದಿನ ದಿನಗಳಲ್ಲಿ ಈ ಸಂವಿಧಾನಾತ್ಮಕ ಮೌಲ್ಯಗಳು ತೀವ್ರ ಸವಾಲುಗಳನ್ನು ಎದುರಿಸುತ್ತಿರುವುದು ಕಠಿಣ ಸತ್ಯವಾಗಿದೆ ಎಂದು ಹೇಳಿದರು.

ಗಣರಾಜ್ಯೋತ್ಸವ ಕೇವಲ ಆಚರಣೆಗಷ್ಟೇ ಸೀಮಿತವಾಗಬಾರದು; ಅದು ಆಡಳಿತಕ್ಕೆ ಜನರಿಂದ ಕೊಡುವ ಎಚ್ಚರಿಕೆಯ ಸಂದೇಶವಾಗಬೇಕು ಎಂದು ಅವರು ತಿಳಿಸಿದರು. ಇಂದು ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಜಾಪ್ರಭುತ್ವದ ಮೂಲ ಸಂಸ್ಥೆಗಳಾದ ಚುನಾವಣಾ ಆಯೋಗ, ಇಡಿ (ED), ಸಿಬಿಐ (CBI), ಎನ್‌ಐಎ (NIA) ಮುಂತಾದವುಗಳನ್ನು ರಾಜಕೀಯ ದುರ್ಬಳಕೆಗೆ ಒಳಪಡಿಸಲಾಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದರು.

ಮತದಾನದ ಹಕ್ಕು ಪ್ರಶ್ನೆಗೆ ಒಳಗಾಗುತ್ತಿರುವುದು (SIR), ಬಡವರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳನ್ನು ವ್ಯವಸ್ಥಿತವಾಗಿ ಅಂಚಿಗೆ ತಳ್ಳುವ ಬುಲ್ಡೋಜರ್ ನ್ಯಾಯದಂತಹ ಕ್ರಮಗಳು ಗಣರಾಜ್ಯಕ್ಕೆ ಅಪಾಯಕಾರಿ ಸೂಚನೆಗಳಾಗಿವೆ ಎಂದು ಮುಖಂಡರು ಎಚ್ಚರಿಸಿದರು.

ಈ ರೀತಿಯ ಅಸಮಾನತೆ ಮತ್ತು ಅನ್ಯಾಯದ ರಾಜಕಾರಣದ ವಿರುದ್ಧ SDPI ಜನರ ಧ್ವನಿಯಾಗಿ ನಿಂತಿದ್ದು, ಸಂವಿಧಾನ ವಿರೋಧಿ ಯಾವುದೇ ನೀತಿ, ಕ್ರಮ ಅಥವಾ ದಮನವನ್ನು ಪಕ್ಷವು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಧಿಕಾರದಲ್ಲಿರುವವರು ತಮ್ಮ ರಾಜಕೀಯ ಅಜೆಂಡಾಗಳಿಗಾಗಿ ಸಂವಿಧಾನವನ್ನು ಬಳಸದೆ, ಸಂವಿಧಾನದ ಹೆಸರಿನಲ್ಲಿ ದೇಶವನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ವಿಭಜನೆಯ ರಾಜಕಾರಣದಿಂದಲೂ, ಭಯದ ಮೂಲಕ ಆಡಳಿತ ನಡೆಸುವುದರಿಂದಲೂ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜನತೆಗೆ ಕರೆ ನೀಡಿದ SDPI ಮುಖಂಡರು, ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಬೇಕು, ಸಂವಿಧಾನವನ್ನು ರಕ್ಷಣಾ ಕವಚವಾಗಿ ರೂಪಿಸಿಕೊಳ್ಳಬೇಕು, ಅನ್ಯಾಯದ ವಿರುದ್ಧ ಮೌನವಾಗಿರಬಾರದು ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರತಿಯೊಂದು ಪ್ರಯತ್ನದ ವಿರುದ್ಧ ಸಂಘಟಿತರಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಜನಶಕ್ತಿ ಮಾತ್ರ ಅಧಿಕಾರಕ್ಕೆ ಉತ್ತರ ನೀಡಬಲ್ಲದು; ಸಂಘಟಿತ ಜನತೆ ಮಾತ್ರ ಈ ದೇಶವನ್ನು ನ್ಯಾಯಯುತ ದಿಕ್ಕಿನಲ್ಲಿ ಮುನ್ನಡೆಸಬಲ್ಲದು ಎಂದು ಅವರು ಹೇಳಿದರು. SDPI ಪಕ್ಷವು ರಸ್ತೆ ಹೋರಾಟದಿಂದ ಹಿಡಿದು ವಿಧಾನಸಭೆಯವರೆಗೆ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಿದೆ ಎಂದು ಘೋಷಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ, “ನಾವು ಹೋರಾಟ ನಿಲ್ಲಿಸುವುದಿಲ್ಲ, ನಾವು ಮೌನವಾಗುವುದಿಲ್ಲ, ನಾವು ಸಂವಿಧಾನವನ್ನು ಬಿಟ್ಟುಕೊಡುವುದಿಲ್ಲ” ಎಂಬ ಘೋಷಣೆಯೊಂದಿಗೆ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು.

Related Posts