Featured, ಅಂಕಣ, ಸ್ಥಳೀಯ

ಸುಂಕದಕಟ್ಟೆ–ನವರಂಗ ಕಾಂಪೌಂಡ್ ರಸ್ತೆ–ಚರಂಡಿ ಸಮಸ್ಯೆ: ತಕ್ಷಣ ಕಾಮಗಾರಿ ಆರಂಭಿಸಲು ಎಸ್‌ಡಿಪಿಐ ಆಗ್ರಹ

ಬಜ್ಪೆ: ಸುಂಕದಕಟ್ಟೆ ನವರಂಗ ಕಾಂಪೌಂಡ್ ಸಮೀಪದ ರಸ್ತೆ ಬದಿಯ ಚರಂಡಿಯಲ್ಲಿ ಕಳೆದ ಆರು ವರ್ಷಗಳಿಂದ ಮಣ್ಣು ತುಂಬಿಕೊಂಡಿರುವುದರಿಂದ, ಮಳೆಗಾಲದಲ್ಲಿ ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆಯೇ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದರಿಂದ ಪ್ರತಿವರ್ಷ ಸ್ಥಳೀಯ ನಾಗರಿಕರು ತಾತ್ಕಾಲಿಕವಾಗಿ ಮಣ್ಣು ಹಾಕಿ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಗಂಭೀರ ಸಮಸ್ಯೆಯ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಒಟ್ಟಾಗಿ ಪಿಡಬ್ಲ್ಯೂಡಿ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದು, ಶಾಶ್ವತ ಪರಿಹಾರಕ್ಕಾಗಿ ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಪರ್ಯಾಯ ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಪಂಚಾಯಿತಿ ವಾರ್ಡ್ ಸಭೆಯಲ್ಲಿಯೂ ದಾಖಲಿಸಲಾಗಿದೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಣ ಮಂಜೂರಾಗಿ ಏಳು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಆರಂಭವಾಗದಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಮತ್ತು ಆತಂಕ ಹೆಚ್ಚಾಗಿದೆ.

ಇದೇ ವೇಳೆ ಸೌಹಾರ್ದನಗರದ ಮುಖ್ಯ ರಸ್ತೆ ಕಾಂಕ್ರಿಟೀಕರಣಗೊಂಡ ಬಳಿಕ ರಸ್ತೆ ಬದಿಯಲ್ಲಿ ಮಣ್ಣು ತುಂಬಿದ್ದರಿಂದ, ವಾಹನಗಳ ಅಡಿಭಾಗಕ್ಕೆ ತಾಗುವ ಅಪಾಯ ಉಂಟಾಗಿತ್ತು. ಈ ವಿಷಯವನ್ನು ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಪರಿಣಾಮವಾಗಿ, ನಿನ್ನೆ ಕಾಂಕ್ರಿಟ್ ಮೂಲಕ ಮರುಜೋಡಣೆ ಕಾರ್ಯ ಕೈಗೊಳ್ಳಲಾಗಿದೆ.

ಆದರೆ ಅದೇ ರೀತಿಯ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸುಂಕದಕಟ್ಟೆ ನವರಂಗ ಕಾಂಪೌಂಡ್ ರಸ್ತೆಯ ಕಾಮಗಾರಿ ಇನ್ನೂ ಪ್ರಾರಂಭವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಎರಡನೇ ಬಾರಿ ಮನವಿ ಸಲ್ಲಿಸಲಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ, ಸುಂಕದಕಟ್ಟೆ–ನವರಂಗ ಕಾಂಪೌಂಡ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಳೆಗಾಲದ ಮುನ್ನವೇ ಆರಂಭಿಸಿ, ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಾಗರಿಕರ ಪರವಾಗಿ ಆಗ್ರಹಿಸಲಾಗುತ್ತಿದೆ ಎಂದು ಎಸ್‌ಡಿಪಿಐ ಮುಖಂಡ ಅಬ್ದುಲ್ ಹಮೀದ್ ಕೊಳಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts