ಮಂಗಳೂರು:
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೋವಿ (ಬಂದೂಕು) ಪರವಾನಗಿ ಹೊಂದಿರುವ ರೈತರು ಹಾಗೂ ಪರವಾನಗಿದಾರರೊಂದಿಗೆ ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರನ್ನು ಭೇಟಿ ಮಾಡಿ, ಕೃಷಿಕರಿಗೆ ನೀಡಲಾಗುತ್ತಿರುವ ಕೋವಿ ಪರವಾನಗಿ ನವೀಕರಣದಲ್ಲಿ ಉಂಟಾಗುತ್ತಿರುವ ವಿಳಂಬ ಹಾಗೂ ನಿರಾಕರಣೆ ಕುರಿತು ಚರ್ಚಿಸಿದರು.

ಕಾಡಂಚಿನ ಗ್ರಾಮಗಳಲ್ಲಿ ಆನೆ, ಚಿರತೆ ಸೇರಿದಂತೆ ಇತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬೆಳೆ ರಕ್ಷಣೆಗಾಗಿ ರೈತರಿಗೆ ಆಯುಧಗಳ ಅಗತ್ಯ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಹ ರೈತರಿಗೆ ಕೋವಿ ಪರವಾನಗಿ ನೀಡುವಲ್ಲಿ ಅನಗತ್ಯ ಅಡೆತಡೆ ಸೃಷ್ಟಿಸಬಾರದು ಎಂದು ಶಾಸಕಿ ಆಗ್ರಹಿಸಿದರು.
ಪರವಾನಗಿ ನವೀಕರಣ ಹಾಗೂ ತಂದೆಯಿಂದ ಮಗನಿಗೆ ಪರವಾನಗಿ ವರ್ಗಾವಣೆ ಮಾಡುವ ಸಂದರ್ಭದಲ್ಲೂ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅರ್ಜಿಗಳನ್ನು ನಿರಾಕರಿಸಲಾಗುತ್ತಿದೆ. ಇದು ನ್ಯಾಯಸಮ್ಮತವಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರವಾನಗಿದಾರರ ಒಕ್ಕೂಟದ ಸಂಚಾಲಕ ಜಯಪ್ರಸಾದ್ ಜೋಶಿ, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕೋವಿ ಪರವಾನಗಿ ನೀಡುವಲ್ಲಿ ಕಟ್ಟುನಿಟ್ಟಿನ ಹಾಗೂ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು, ಯಾವುದೇ ಅರ್ಜಿಯನ್ನು ಕಾರಣವಿಲ್ಲದೆ ನಿರಾಕರಿಸಿಲ್ಲ. ಪೊಲೀಸ್ ವರದಿಯ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳ ಕುರಿತು ಗಮನಹರಿಸಿ, ಕಂದಾಯ, ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ವರದಿಗಳನ್ನು ಪಡೆದು ಒಂದು ತಿಂಗಳೊಳಗೆ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಭೆಯಿಂದಾಗಿ ಕೋವಿ ಪರವಾನಗಿ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.


