ಸುಳ್ಯ: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕೆಪಿಎಸ್ ಸ್ಕೂಲ್ ಗಾಂಧಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸುಳ್ಯ ತಾಲೂಕು ಮಟ್ಟದ ಬಾಲಕ–ಬಾಲಕಿಯರ ಫುಟ್ಬಾಲ್ ಪಂದ್ಯಾಟವು ಗಾಂಧಿನಗರ ಕ್ರೀಡಾಂಗಣದಲ್ಲಿ ನಡೆಯಿತು.
ಬಾಲಕರ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಗ್ರೀನ್ ವ್ಯೂ ಪ್ರೌಢಶಾಲೆ 1–0 ಗೋಲುಗಳಿಂದ ಸೈಂಟ್ ಜೋಸೆಫ್ ಪ್ರೌಢಶಾಲೆಯನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದರೊಂದಿಗೆ ಗ್ರೀನ್ ವ್ಯೂ ತಂಡವು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲೆಯ ತಂಡವು ಕೆಪಿಎಸ್ ಗಾಂಧಿನಗರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಕೆಪಿಎಸ್ ಗಾಂಧಿನಗರ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ವೈಯಕ್ತಿಕ ಪ್ರಶಸ್ತಿಗಳು
ಬಾಲಕರ ವಿಭಾಗದಲ್ಲಿ ಸೈಂಟ್ ಜೋಸೆಫ್ ಪ್ರೌಢಶಾಲೆಯ ಇಯಾದ್ ಇಸ್ಮಾಯಿಲ್ ಬೆಸ್ಟ್ ಫಾರ್ವರ್ಡರ್, ಗ್ರೀನ್ ವ್ಯೂ ಪ್ರೌಢಶಾಲೆಯ ಮಿಸ್ಬಾಕ್ ಬೆಸ್ಟ್ ಗೋಲ್ ಕೀಪರ್ ಹಾಗೂ ಗ್ರೀನ್ ವ್ಯೂ ಪ್ರೌಢಶಾಲೆಯ ಮಹಮ್ಮದ್ ಕೈಫ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಆಯ್ಕೆಯಾದರು.
ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲೆಯ ಆಯಿಷತ್ ಜುಮೈರಾ ಬೆಸ್ಟ್ ಫಾರ್ವರ್ಡರ್, ಸಾನಿಕ ಬೆಸ್ಟ್ ಗೋಲ್ ಕೀಪರ್ ಹಾಗೂ ಜನನಿ ಎಸ್.ಬಿ. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಆಯ್ಕೆಯಾದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಎಸ್ ಗಾಂಧಿನಗರ ಎಸ್‌ಡಿಎಂಸಿ ಉಪಾಧ್ಯಕ್ಷ ಚಿದಾನಂದ ಕಾಯರ್ತೋಡಿ ವಹಿಸಿದ್ದರು. ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಬಹುಮಾನಗಳನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಕೆಪಿಎಸ್ ಸುಳ್ಯ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಪರಮೇಶ್ವರಿ, ಪ್ರೌಢಶಾಲಾ ವಿಭಾಗದ ಜ್ಯೋತಿ ಲಕ್ಷ್ಮಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಅಶ್ವಿನಿ, ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಿನಿ, ಪ್ರಾಥಮಿಕ ವಿಭಾಗದ ಪಿಇಟಿ ಕಲ್ಪಲತಾ, ಭವಾನಿ ಮೇಡಂ, ಗ್ರೀನ್ ವ್ಯೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇಲ್ಯಾಸ್ ಕಾಶಿಪಟ್ಟಣ, ಟೀಮ್ ರೋಜಾ ಅಧ್ಯಕ್ಷ ಅಶ್ರಫ್ ಗುರುಂಪು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಷ್ಣು ನಾರ್ಕೋಡ್ ನಿರೂಪಿಸಿದರು. ತಂಡಗಳ ಕೋಚ್‌ಗಳಾಗಿ ರಿಜು ಮತ್ತು ರವೂಫ್ ಕಾರ್ಯನಿರ್ವಹಿಸಿದರು. ತೀರ್ಪುಗಾರರಾಗಿ ಖರ್ರಾರ್, ಹೈದರ್, ಸಿಯಾ ಹಾಗೂ ಶಾಝಿನ್ ಕರ್ತವ್ಯ ನಿರ್ವಹಿಸಿದರು.
ಪಂದ್ಯಾಟದಲ್ಲಿ ವಿವಿಧ ಶಾಲೆಗಳ ಬಾಲಕ–ಬಾಲಕಿಯರು ಉತ್ಸಾಹದಿಂದ ಪಾಲ್ಗೊಂಡಿದ್ದು, ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಿದರು.





m
