ಇತರೆ

ಸುಳ್ಯದಲ್ಲಿ ಇಂದು (ಸೆ. 11) ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ

ವಿವಿಧ ದಫ್, ಸ್ಕೌಟ್, ಫ್ಲವರ್ ಶೋ ಹಾಗೂ ಇಸ್ಲಾಮಿಕ್ ಕಲಾ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ನಡೆಯಲಿರುವ ಮೀಲಾದ್ ಜಾಥಾ

ಸುಳ್ಯ: ಮಾನವೀಯ ಮೌಲ್ಯಗಳು ಮರೆಯಾಗುತ್ತಿದ್ದ ಕಾಲಘಟ್ಟದಲ್ಲಿ ಸತ್ಯ, ಶಾಂತಿ, ಪ್ರೀತಿ, ಕರುಣೆ ಮತ್ತು ಸಹೋದರತ್ವದ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾನ್ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಅವರ ಜನ್ಮದಿನಾಚರಣೆಯ ಅಂಗವಾಗಿ ತಾಲೂಕು ಮೀಲಾದ್ ಸಮಿತಿ, ಸುಳ್ಯ ವತಿಯಿಂದ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಸೆ. 11ರಂದು ಶುಕ್ರವಾರ (ಇಂದು) ಸಂಜೆ 4 ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ ಆರಂಭಗೊಳ್ಳಲಿದೆ.

ಪ್ರವಾದಿ ಮುಹಮ್ಮದ್ (ಸ.ಅ.) ಅವರ ಮಾನವೀಯ ಸಂದೇಶಗಳನ್ನು ಸಾರುವ ಮದ್ಹ್ ಹಾಡುಗಳು, ಇಸ್ಲಾಮಿಕ್ ಕಲಾ–ಸಾಹಿತ್ಯದ ವೈಶಿಷ್ಟ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ  ಕಾಲ್ನಡಿಗೆ ಜಾಥಾ ಶಿಸ್ತುಬದ್ಧವಾಗಿ ಸಾಗಲಿದೆ.

ದಫ್ ಪ್ರದರ್ಶನ ಪ್ರಮುಖ ಆಕರ್ಷಣೆ

ಜಾಥಾದ ಪ್ರಮುಖ ಆಕರ್ಷಣೆಗಳಲ್ಲಿ ವಿವಿಧ ದಫ್ ತಂಡಗಳ ವಿಶೇಷ ಪ್ರದರ್ಶನ ಗಮನ ಸೆಳೆಯಲಿದೆ. ಟೀಮ್ ರೋಜಾ, ಸುಳ್ಯ ಸಾರಥ್ಯದಲ್ಲಿ ಹಾಗೂ ನಾಫಿ ಕೊಡಗು ಅವರ ನೇತೃತ್ವದಲ್ಲಿ ವಿರಾಜಪೇಟೆಯ ಸುಮಾರು 90 ದಫ್ ಕಲಾವಿದರನ್ನು ಒಳಗೊಂಡ ಕಡಂಗ ಮೆಗಾ ದಫ್ ತಂಡ ಭಾಗವಹಿಸಲಿದೆ. ಇದರೊಂದಿಗೆ ಗ್ರೀನ್ ಬಾಯ್ಸ್ ಜಟ್ಟಿಪಳ್ಳ ಪ್ರಾಯೋಜಕತ್ವದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಪೈನಾರೀ ಮೆಗಾ ದಫ್ ಟೀಮ್, ಕುಂಜಿಲಾ ವಿಶೇಷ ದಫ್ ಪ್ರದರ್ಶನ ನೀಡಲಿದೆ.

ದಫ್ ಇಸ್ಲಾಮಿಕ್ ಪರಂಪರೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿರುವ ಕಲಾ ಅಭಿವ್ಯಕ್ತಿಯಾಗಿದ್ದು, ಕಾಲಕ್ರಮೇಣ ಈ ಕಲೆಯ ಜನಪ್ರಿಯತೆ ಮತ್ತಷ್ಟು ವಿಸ್ತರಿಸುತ್ತಿದೆ. ಮೀಲಾದ್ ಜಾಥಾದಲ್ಲಿ ವಿವಿಧ ತಂಡಗಳು ವಿಭಿನ್ನ ಶೈಲಿಯಲ್ಲಿ ನೀಡಲಿರುವ ದಫ್ ಪ್ರದರ್ಶನ ವಿಶೇಷ ಮೆರುಗು ನೀಡಲಿದೆ. ಸುಳ್ಯದ ಪ್ರತಿಷ್ಠಿತ ಸಮಾಜಸೇವಾ ವಾಟ್ಸಪ್ ಗ್ರೂಪ್ K A 21 ಸಾರಥ್ಯದಲ್ಲಿ ಶಿಸ್ತುಬದ್ಧ ದಫ್ ಪ್ರದರ್ಶನಕ್ಕೆ ಹೆಸರುವಾಸಿಯಾದ ದಾರುಲ್ ಫಲಾ, ಕೊಳಂಕುಳಂ ದಫ್ ತಂಡ, BMA ಗ್ರೂಪ್ ಪ್ರಾಯೋಜಕತ್ವದ ಸಾಂಪ್ರದಾಯಿಕ ಮುಕ್ಕಾ ದಫ್ ತಂಡ ಹಾಗೂ ಟೀಮ್ ಸುಳ್ಯ ಪ್ರಾಯೋಜಕತ್ವದ ಮಾಡನ್ನೂರು ದಫ್ ತಂಡಗಳು ಕಲಾತ್ಮಕ ದಫ್ ಪ್ರದರ್ಶನ ನೀಡಲಿವೆ.

ಇದರೊಂದಿಗೆ ಟೀಮ್ ಬಾಯ್ಸ್ ಪ್ರಾಯೋಜಕತ್ವದ ಶಿಸ್ತುಬದ್ಧ ಸ್ಕೌಟ್ ತಂಡದ ಪಥಸಂಚಲನವೂ ಜಾಥಾದ ಪ್ರಮುಖ ಆಕರ್ಷಣೆಯಾಗಲಿದೆ.

ಸ್ಥಳೀಯ ಕಲಾ ತಂಡಗಳ ವೈವಿಧ್ಯಮಯ ಪ್ರದರ್ಶನ

ಸುಳ್ಯದ ಯುವಕರು ಸಂಘಟಿತರಾಗಿ ರಚಿಸಿಕೊಂಡ ಸ್ಕೌಟ್ ತಂಡದ ಶಿಸ್ತುಬದ್ಧ ನಡಿಗೆ,  ಇದರೊಂದಿಗೆ ಮದರಸ ವಿದ್ಯಾರ್ಥಿಗಳ ಫ್ಲವರ್ ಶೋ, ಜಟ್ಟಿಪಳ್ಳದ ಯುವಕರ ಸಾಹಸಮಯ ಸ್ಕೇಟಿಂಗ್ ಪ್ರದರ್ಶನ ಹಾಗೂ ಸ್ಥಳೀಯ ಮತ್ತು ರಾಜ್ಯಮಟ್ಟದಲ್ಲಿ ಶಿಸ್ತುಬದ್ಧ ಪಥಸಂಚಲನಕ್ಕೆ ಹೆಸರುವಾಸಿಯಾದ ವಿವಿಧ ಸ್ಕೌಟ್ ತಂಡಗಳ ಪಥಸಂಚಲನವೂ ಜಾಥಾದಲ್ಲಿ ವಿಶೇಷ ಆಕರ್ಷಣೆಯಾಗಲಿದೆ. ವಿವಿಧ ಕಲಾ ತಂಡಗಳು, ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಸ್ಕೌಟ್ ತಂಡಗಳ ಸಮನ್ವಯದೊಂದಿಗೆ ನಡೆಯಲಿರುವ ಈ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಶಿಸ್ತು, ಸೌಹಾರ್ದತೆ ಮತ್ತು ಕಲಾ ವೈಭವದ ಸಂಗಮವಾಗಿ ಮೂಡಿಬರಲಿದೆ.

ಪ್ರವಾದಿ ಮುಹಮ್ಮದ್ (ಸ.ಅ.) ಅವರ ಶಾಂತಿ, ಪ್ರೀತಿ, ಕರುಣೆ ಮತ್ತು ಸಹೋದರತ್ವದ ಸಂದೇಶವನ್ನು ಜನಮನಗಳಿಗೆ ತಲುಪಿಸುವ ಉದ್ದೇಶದಿಂದ ನಡೆಯಲಿರುವ ಜಾಥಾ ಸುಳ್ಯದ ಮೀಲಾದ್ ಆಚರಣೆಯಲ್ಲಿ ವಿಶೇಷ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಕಾಲ್ನಡಿಗೆ ಜಾಥ ಸಮಾಪ್ತಿ ಗೊಂಡ ಬಳಿಕ ಸುಳ್ಯ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ನಿರ್ಮಿಸಿದ ಮರ್ಹೂಂ ಸತ್ತಾರ್ ಸಂಗಮ್ ವೇದಿಕೆಯಲ್ಲಿ ಮುನವ್ವಿರ್ ಸಿನಾನ್ ಮಲಪ್ಪುರಂ ಹಾಗೂ ಮಾಸ್ಟರ್ ಫಾಝಲ್ ಕಟಪಾಡಿ ತಂಡದಿಂದ ಪ್ರವಾದಿ ಸಂದೇಶ ಸಾರುವ ಮದ್ಹ್ ಹಾಡುಗಳ ಕಾರ್ಯಕ್ರಮ ನಡೆಯಲಿದೆ. ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ವತಿಯಿಂದ ಸುಳ್ಯದಲ್ಲಿ ನಡೆಯಲಿರುವ ಈ ವಿಶಿಷ್ಟ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುವ ನಿರೀಕ್ಷೆಯಿದೆ
m