Featured, ಅಂಕಣ, ಸ್ಥಳೀಯ

ಗೂನಡ್ಕ: ಭವ್ಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಮರಸ್ಯದ ಸಂದೇಶ

ಗೂನಡ್ಕ: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಗೂನಡ್ಕ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸ್ಥಳೀಯ ಖತೀಬ್ ಅಶ್ರಫ್ ಸಖಾಫಿ ಅಲ್ ಮಳ್ಹರಿ ಅವರು ಮಾತನಾಡಿ, “1947ರ ಮಧ್ಯರಾತ್ರಿ ನಮಗೆ ಸ್ವಾತಂತ್ರ್ಯ ಲಭಿಸಿದೆಯಾದರೂ, ಇದರ ಹಿಂದೆ 200 ವರ್ಷಗಳ ಸುದೀರ್ಘ ಹೋರಾಟದ ಫಲವಿದೆ. ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರ ಲೂಟಿಯ ವಿರುದ್ಧ ನಮ್ಮ ದೇಶದ ವೈವಿಧ್ಯಮಯ ಜಾತಿ, ಮತ, ಪಂಗಡ ಹಾಗೂ ವರ್ಣಭೇದವಿಲ್ಲದ ಸಾಮರಸ್ಯದ ಬದುಕು ನಮ್ಮ ಬಲವಾಗಿತ್ತು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಹಮ್ಮದ್ ಕುಂಞಿ ಗೂನಡ್ಕ ಮಾತನಾಡಿ, ಬದ್ರಿಯಾ ಜುಮ್ಮಾ ಮಸೀದಿ ಕೇವಲ ಆರಾಧನಾಲಯವಲ್ಲ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ ಎಂದು ಹೇಳಿದರು. ಮಸೀದಿಗೆ ಜಾಗವನ್ನು ದಾನವಾಗಿ ನೀಡಿದ ದಿವಂಗತ ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರನ್ನು ಕೃತಜ್ಞತೆಯಿಂದ ಸ್ಮರಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪೂರ್ವಿಕರು ನೀಡಿದ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಇಂದಿನ ಕಾಲಘಟ್ಟದಲ್ಲಿ ಸೌಹಾರ್ದತೆ ಹಾಗೂ ಸಹಬಾಳ್ವೆಯ ಅನಿವಾರ್ಯತೆಯನ್ನು ಅವರು ಒತ್ತಿ ಹೇಳಿದರು.ಹಾರಿಸ್ ಸಹದಿ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪ್ರಬಂಧ ಮಂಡನೆ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ, ವಿಶೇಷವಾಗಿ ಉಲೇಮಾಗಳು ಹಾಗೂ ಸೂಫಿ ಸಂತರ ಪಾತ್ರ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಲಾಯಿತು.

ಕಾರ್ಯಕ್ರಮದಲ್ಲಿ ಗೂನಡ್ಕ ಜಮಾಅತ್ ಉಪಾಧ್ಯಕ್ಷರಾದ ಉಮ್ಮರ್ ಪುತ್ರಿ, ಅಲ್ ಅಮೀನ್ ಗೂನಡ್ಕ ಉಪಾಧ್ಯಕ್ಷರಾದ ಜಿ. ಎಂ. ಅಬ್ದುಲ್ಲಾ ಸೇರಿದಂತೆ ಜಮಾಅತ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಜಮಾಅತ್ ಖಜಾಂಚಿ ಡಿ. ಆರ್. ಅಬ್ದುಲ್ ಖಾದರ್, ಮಾಜಿ ಅಧ್ಯಕ್ಷರಾದ ಹಾಜಿ ಪಿ. ಎ. ಅಬ್ದುಲ್ಲಾ, ಹಿರಿಯ ನಿವೃತ್ತ ಸರ್ಕಾರಿ ಅಧಿಕಾರಿ ಇಬ್ರಾಹಿಂ ಗೂನಡ್ಕ, ಹಾಜಿ ಜಿ. ಅಬ್ಬಾಸ್ ಸೇರಿದಂತೆ ಮದ್ರಸಾ ವಿದ್ಯಾರ್ಥಿಗಳು, ವಿವಿಧ ಸುನ್ನಿ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ದೇಶಪ್ರೇಮ, ಸ್ನೇಹ ಮತ್ತು ದೇಶರಕ್ಷಣೆಯ ಪ್ರತಿಜ್ಞಾ ವಿಧಿ ನೆರವೇರಿಸಲಾಯಿತು. ಗೂನಡ್ಕ ಟ್ರೇಡರ್ಸ್ ಮಾಲೀಕರಾದ ರಂಜನ್ ಕಲ್ಲಗೆದ್ದೆ ಅವರು ಸಿಹಿತಿಂಡಿ ನೀಡಿ ಸಹಕರಿಸಿದರು.

ಜಮಾಅತ್ ಕಾರ್ಯದರ್ಶಿ ಅಝರ್ ಚೇರೂರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಎಸ್. ಎ. ವಂದಿಸಿದರು.

Related Posts