ಅಮರ ಪಡ್ನೂರು–ಮುಡ್ನೂರು ಗ್ರಾಮಗಳ ಅಭಿಮಾನಿಗಳಿಂದ ಗೌರವ ಸಮರ್ಪಣೆ; ಪಕ್ಷಾತೀತ ಜನಸೇವೆಗೆ ಸಾರ್ವಜನಿಕರ ಪ್ರಶಂಸೆ

ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಧಾಕೃಷ್ಣ ಬೊಳ್ಳೂರುರಿಗೆ ಅಮರ ಪಡ್ನೂರು ಹಾಗೂ ಮುಡ್ನೂರು ಗ್ರಾಮದ ಅಭಿಮಾನಿಗಳ ವತಿಯಿಂದ ಕುಕ್ಕುಜಡ್ಕದ ಅಮರ ಸಭಾಭವನದಲ್ಲಿ ಭವ್ಯ ಅಭಿನಂದನಾ ಸಮಾರಂಭ ನಡೆಯಿತು. ಪಕ್ಷಭೇದ ಮರೆತು ಜನಸೇವೆಯಲ್ಲಿ ತೊಡಗಿರುವ ನಾಯಕತ್ವಕ್ಕೆ ಸಾರ್ವಜನಿಕರು ವ್ಯಕ್ತಪಡಿಸಿದ ಅಪಾರ ಗೌರವ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ರಾಧಾಕೃಷ್ಣ ಬೊಳ್ಳೂರು ಅವರು ಪಕ್ಷಭೇದವಿಲ್ಲದೆ ಕೆಲಸ ನಿರ್ವಹಿಸುವ ಚತುರ ಸಂಘಟಕ : ಸದಾಶಿವ ಮೂಕಮಲೆ
ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ಅಧ್ಯಕ್ಷ ಶ್ರೀನಾಥ್ ನೆಲ್ಲಿಕುಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಮೂಕಮಲೆ ಉದ್ಘಾಟಿಸಿ ಮಾತನಾಡಿದ ಅವರು, “ಅಮರ ಪಡ್ನೂರು–ಮುಡ್ನೂರು ಗ್ರಾಮದ ಪ್ರತಿಯೊಬ್ಬರಿಗೂ ಸಹಾಯ ಹಸ್ತ ಚಾಚಿರುವ ರಾಧಾಕೃಷ್ಣ ಬೊಳ್ಳೂರ ಅವರು ಪಕ್ಷಭೇದವಿಲ್ಲದೆ ಕೆಲಸ ನಿರ್ವಹಿಸುವ ಚತುರ ಸಂಘಟಕ. ಅಭಿವೃದ್ಧಿಯ ಹರಿಕಾರರಾಗಿರುವ ಅವರಿಗೆ ಸಲ್ಲಿಸುವ ಈ ಅಭಿನಂದನೆ ನಮಗೆಲ್ಲರಿಗೂ ಹೆಮ್ಮೆಯ ವಿಷಯ,” ಎಂದರು.
ಬೊಳ್ಳೂರು ಜನರ ಸಂಕಷ್ಟಕ್ಕೆ ಸ್ಪಂದಿಸುವ ನಾಯಕ : ಶಶಿಧರ್ ಎಂ ಜೆ
ಅಭಿನಂದನಾ ಭಾಷಣ ಮಾಡಿದ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಶಶಿಧರ್ ಎಂ.ಜೆ. ಮೊಂಟಡ್ಕ ಅವರು, “ಧೀನರ ಮತ್ತು ನೊಂದವರ ಕಷ್ಟಕ್ಕೆ ಸ್ಪಂದಿಸುವ ಗುಣವೇ ಬೊಳ್ಳೂರುರವರ ವೈಶಿಷ್ಟ್ಯ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಸುಧೀರ್ಘ ರಾಜಕೀಯ ಜೀವನ ಕಟ್ಟಿಕೊಂಡಿದ್ದಾರೆ. ಅಹೋರಾತ್ರಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣದಿಂದಲೇ ಅವರು ಜನ ಮೆಚ್ಚುಗೆ ಪಡೆದಿದ್ದಾರೆ. ಸಹಾಯ ಎಂದರೆ ಏನು ಎಂಬುದನ್ನು ಬೊಳ್ಳೂರುರನ್ನು ನೋಡಿ ಕಲಿಯಬೇಕು,” ಎಂದು ಹೇಳಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೇಕಲ್ಲು ಮಾತನಾಡಿ, “ಎರಡು ಗ್ರಾಮದ ಅಭಿಮಾನಿಗಳ ನಿರೀಕ್ಷೆ ಈ ಕಾರ್ಯಕ್ರಮದಲ್ಲಿ ವ್ಯಕ್ತವಾಗಿದೆ. ಬ್ಲಾಕ್ ಅಧ್ಯಕ್ಷರಾಗಿ ಅವರ ಮೂಲಕ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಜರುಗಲಿ,” ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾದ ವೆಂಕಟ್ರಮಣ ಗೌಡ ಇಟ್ಟಿಗುಂಡಿ ಹಾಗೂ ಅಣ್ಣಾಜಿ ಗೌಡ ಅವರು, “ಅನುಭವ ಮತ್ತು ನಿಷ್ಠೆ ಹೊಂದಿದ ನಾಯಕರು ಮಾತ್ರ ಜನಪರ ಕಾರ್ಯ ಮಾಡಲು ಸಾಧ್ಯ. ಅಂತಹ ಅಪರೂಪದ ವ್ಯಕ್ತಿಯನ್ನು ನಮ್ಮ ಊರು ಮರೆಯಲಾರದು,” ಎಂದು ಶ್ಲಾಘಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಧಾಕೃಷ್ಣ ಬೊಳ್ಳೂರು ಅವರು, “ಈ ಊರಿನ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ಚೊಕ್ಕಾಡಿ ಮಣ್ಣಿನ ಗುಣದಿಂದಲೇ ನನಗೆ ನಾಯಕತ್ವದ ಪಾಠ ಕಲಿತಿದೆ. ಪಕ್ಷ ಸಂಘಟನೆಯ ಜೊತೆಗೆ ಜನರ ಪ್ರೀತಿ ಗೆಲ್ಲುವ ಕಾರ್ಯವನ್ನು ಮುಂದುವರಿಸುತ್ತೇನೆ. ರಾಜಕಾರಣದೊಂದಿಗೆ ಊರಿನ ಚಿಂತನೆ ಮಾಡುವುದೇ ನನ್ನ ಧ್ಯೇಯ,” ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅಮರ ಪಡ್ನೂರು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರಾಮಯ್ಯ ರೈ, ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸರೋಜ ಯತೀಶ್ ಹಿರಿಯಡ್ಕ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರನ್ ಕೂಟೇಲು ಉಪಸ್ಥಿತರಿದ್ದರು. ಅಮರ ಮುಡ್ನೂರು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಹೂವಪ್ಪ ಗೌಡ ಅರ್ನೋಜಿ ಸ್ವಾಗತಿಸಿ ಪ್ರಸ್ತಾವಿಸಿದರು. ಯತೀಶ್ ಹಿರಿಯಡ್ಕ ವಂದಿಸಿದರು. ವಿನಯ ಸಂಕೇಶ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಅಸಂಘಟಿತ ಕಾರ್ಮಿಕರ ಘಟಕ ಅಧ್ಯಕ್ಷ ಮಂಜುನಾಥ್ ಕಂದಡ್ಕ ಸೇರಿದಂತೆ ಅನೇಕ ಗಣ್ಯರು ಹಾಗೂ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾರಂಭವು ಜನಪರ ನಾಯಕತ್ವದ ಸ್ಫೂರ್ತಿದಾಯಕ ಸಾಕ್ಷಿಯಾಗಿ, ಗ್ರಾಮಾಭಿವೃದ್ಧಿಗೆ ನಿಷ್ಠಾವಂತ ನಾಯಕತ್ವದ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳಿತು.



