Featured, ಸ್ಥಳೀಯ

ಗ್ರಾಮ ಪಂಚಾಯತ್ ರಸ್ತೆಗಳಿಗೆ ದೃಢಪತ್ರ ನೀಡಲು ಮಾರ್ಗಸೂಚಿ ರೂಪಿಸಲು ಮನವಿ

ಜಿಲ್ಲಾ ಪಂಚಾಯತ್ ಸಿಇಒಗೆ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ

ಸುಳ್ಯ: ಗ್ರಾಮಾಂತರ ಪ್ರದೇಶಗಳಲ್ಲಿ 9 ಮತ್ತು 11 ಹಾಗೂ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಗ್ರಾಮ ಪಂಚಾಯತ್ ರಸ್ತೆಗಳಿಗೆ ದೃಢಪತ್ರ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ, ಐಎಎಸ್ ಅವರಿಗೆ ಮನವಿ ಸಲ್ಲಿಸಿದರು.
ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 9 ಮತ್ತು 11 ದಾಖಲೆಗಳೊಂದಿಗೆ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಲು ಸರ್ಕಾರದ ನಿಯಮಾನುಸಾರ ಪ್ರಾಧಿಕಾರಗಳು ಹಾಗೂ ಜಿಲ್ಲಾ ಸಹಾಯಕ ನಿರ್ದೇಶಕರ ಅನುಮೋದನೆ ಅಗತ್ಯವಾಗುತ್ತದೆ. ಗ್ರಾಮಾಂತರ ಪ್ರದೇಶಗಳಿಂದ ಸ್ವೀಕರಿಸುವ ಪ್ರಸ್ತಾವನೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮುಖ್ಯವಾಗಿ ಗ್ರಾಮ ಪಂಚಾಯತ್ ರಸ್ತೆಗಳ ಕುರಿತು ಗ್ರಾಮ ಪಂಚಾಯತ್‌ನಿಂದ ದೃಢಪತ್ರ ಅವಶ್ಯಕವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಗ್ರಾಮ ಪಂಚಾಯತ್ ವಿವಿಧ ಯೋಜನೆಗಳಡಿ ಅಭಿವೃದ್ಧಿಪಡಿಸಿದ ಸಾರ್ವಜನಿಕ ರಸ್ತೆಗಳು ದಾಖಲೆಗಳ ಪ್ರಕಾರ ಪಟ್ಟಾ ಭೂಮಿ ಅಥವಾ ಸರ್ಕಾರಿ ಭೂಮಿಯಾಗಿ ದಾಖಲಾಗಿರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ಇದೇ ವೇಳೆ ಖಾಸಗಿ ರಸ್ತೆಗಳನ್ನು ಭೂ ಪರಿವರ್ತನೆ ಮಾಡಿ ಪಂಚಾಯತ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ಅನೇಕ ಬಾರಿ ಅಸಾಧ್ಯವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭೂಮಿಯ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದು ಪರಿಶೀಲನೆ ನಡೆಸಿ ಪಂಚಾಯತ್ ಪ್ರಾಪರ್ಟಿ ದಾಖಲೆಗಳಲ್ಲಿ ನಮೂದಿಸಿ, ಹಾಲಿ ಉಪಯೋಗದಲ್ಲಿರುವ ರಸ್ತೆಗಳ ಬಗ್ಗೆ ಗ್ರಾಮ ಪಂಚಾಯತ್‌ಗಳಿಂದ ದೃಢಪತ್ರ ನೀಡಲು ಅವಕಾಶ ಕಲ್ಪಿಸಿದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮುಸ್ತಫ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಜನರ ಹಿತಾಸಕ್ತಿಯನ್ನು ಪರಿಗಣಿಸಿ ಹಾಲಿ ಉಪಯೋಗದಲ್ಲಿರುವ ಗ್ರಾಮ ಪಂಚಾಯತ್ ರಸ್ತೆಗಳ ಬಗ್ಗೆ ದೃಢಪತ್ರ ನೀಡುವ ಸಲುವಾಗಿ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಅವರು ಸಿಇಒಗೆ ಮನವಿ ಸಲ್ಲಿಸಿದರು.

Related Posts