ಪಾಲ್ತಾಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ಗ್ರಾಮ ಪಂಚಾಯತ್ ಆಗಬೇಕೆಂಬುದು ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದೆ : ಎ.ಎಸ್ ರಝಾಕ್ SDPI ಮುಖಂಡ
ಏ.4: ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ಗೆ ಆಗ್ರಹಿಸಿ ಜನಾಗ್ರಹ ಸಭೆಯು ಕಡಬ ತಾಲೂಕಿನ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಕೇಂದ್ರ ಭಾಗವಾದ ಅಂಕತಡ್ಕದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೂತ್ ಸಮಿತಿ ವತಿಯಿಂದ ದಿನಾಂಕ 04/04/26 ರಂದು ನಡೆಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಮೀರಝ್ ಸುಳ್ಯ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರತ್ಯೇಕ ಗ್ರಾ.ಪಂ ನ ಅಗತ್ಯತೆಯನ್ನು ಒತ್ತಿ ಹೇಳಿದರು. ಗ್ರಾಮಸ್ಥರ ಹೋರಾಟಕ್ಕೆ ಎಸ್ಡಿಪಿಐ ಪಕ್ಷವು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಎಸ್ ಡಿಪಿಐ ಬೆಳ್ಳಾರೆ ಬ್ಲಾಕ್ ಸಮಿತಿ ಅಧ್ಯಕ್ಷರು, ಮಾಜಿ ಗ್ರಾ.ಪಂ ಸದಸ್ಯರಾದ ಎಂ.ಎ ರಫೀಕ್ ಮಾತನಾಡಿ ಪ್ರತ್ಯೇಕ ಗ್ರಾ.ಪಂ ಗೆ ಬೇಕಾದ ಅರ್ಹತೆಗಳು, ಹೋರಾಟದ ಅಗತ್ಯತೆಯನ್ನು ವಿವರಿಸಿದರು.
ಪಾಲ್ತಾಡಿ ಗ್ರಾಮವು ಸುಮಾರು 3000ಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, 8 ಗ್ರಾ.ಪಂ ಸದಸ್ಯರನ್ನು ಹೊಂದಿದೆ. ಗ್ರಾಮದಲ್ಲಿ ಸುಮಾರು 2000 ಕ್ಕಿಂತ ಹೆಚ್ಚು ಮತದಾರರಿದ್ದು, ಗ್ರಾಮ ಪಂಚಾಯತ್ ಆಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಹೇಳಿದರು.
ಎಸ್ಡಿಪಿಐ ಮುಖಂಡರಾದ ಎ.ಎಸ್ ರಝಾಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಸ್ಥರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗೆ ದಿನದ ಕೆಲಸ ಬಿಟ್ಟು ಪಂಚಾಯತ್ ಕಚೇರಿ ಸವಣೂರಿಗೆ ಹೋಗಬೇಕು. ಅಂಕತಡ್ಕದಿಂದ ಸವಣೂರಿಗೆ ಸರಿ ಸುಮಾರು 10 ಕಿ.ಮೀ ದೂರವಿದ್ದು, ಯಾವುದೇ ಸರ್ಕಾರಿ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಇದು ಜನಸಾಮಾನ್ಯರನ್ನು ಪಂಚಾಯತ್ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ. ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಅಂಕತಡ್ಕ ಎಂಬಲ್ಲಿ ಈಗಾಗಲೇ ಸರ್ಕಾರ 2 ಎಕರೆ ಸ್ಥಳವನ್ನು ಕಾದಿರಿಸಲಾಗಿದೆ. ಪಾಲ್ತಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ಗ್ರಾಮ ಪಂಚಾಯತ್ ಆಗಬೇಕೆಂಬುದು ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದೆ ಎಂದರು.
ಜನಾಗ್ರಹ ಸಭೆಯ ಅಧ್ಯಕ್ಷತೆಯನ್ನು ಅಂಕತಡ್ಕ ಬೂತ್ ಸಮಿತಿ ಅಧ್ಯಕ್ಷರಾದ ಎ.ಆರ್ ರಝಾಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ ಮಾಜಿ ಸದಸ್ಯರಾದ ಬಾಬು ಎನ್. ಸವಣೂರು, ಎ.ಎಸ್ ಶಬೀನಾ ಅಂಕತಡ್ಕ ಹಾಗೂ ಹಿತೈಷಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಪಾಲ್ತಾಡಿ ಗ್ರಾಮ ಆಡಳಿತ ಅಧಿಕಾರಿ, ಗ್ರಾಮಸ್ಥರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಕ್ಕೆ ಮನವಿಯನ್ನು ತಲುಪಿಸುವುದಾಗಿ ಭರವಸೆ ನೀಡಿದರು. ಸಯ್ಯದ್ ಆರೀಫ್ ಕಾರ್ಯಕ್ರಮವನ್ನು ನಿರೂಪಿಸಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು ಏನು
1. ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತ್ ಆಗಿ ಘೋಷಿಸಬೇಕು.
2. ಶಾಶ್ವತ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಅನುದಾನ ಮಂಜೂರುಗೊಳಿಸಬೇಕು.
3. ಪಾಲ್ತಾಡಿ ಗ್ರಾಮವು 2 ವಾರ್ಡ್ ಗಳನ್ನು ಹೊಂದಿದ್ದು, ಹೊಸದಾಗಿ 3ನೇ ವಾರ್ಡ್ ಸ್ಥಾಪಿಸಬೇಕು.
4. ಗ್ರಾಮದ ಕೇಂದ್ರ ಭಾಗವಾದ ಅಂಕತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಕೇಂದ್ರ ಮಾಡಬೇಕು.
5. ಗ್ರಾಮದ ಕೇಂದ್ರ ಭಾಗವಾದ ಅಂಕತಡ್ಕದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ, ಸುಸಜ್ಜಿತ ಬಸ್ ತಂಗುದಾಣ, ದಾರಿದೀಪ ವ್ಯವಸ್ಥೆಗೆ ವಿಶೇಷ ಅನುದಾನ ನೀಡಬೇಕು.
ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆಗೆ ಸರಕಾರದ ಪ್ರಮುಖ ಮಾನದಂಡಗಳು ?
ರಾಜ್ಯದಲ್ಲಿ ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. Karnataka Gram Swaraj and Panchayat Raj Act, 1993 ಅಧಿನಿಯಮದಡಿ ಈ ನಿಯಮಗಳು ಜಾರಿಯಲ್ಲಿದ್ದು, ಅವುಗಳನ್ನು ಪೂರೈಸಿದ ಬಳಿಕವೇ ಹೊಸ ಪಂಚಾಯತ್ಗೆ ಅನುಮೋದನೆ ನೀಡಲಾಗುತ್ತದೆ.
ಸರ್ಕಾರದ ಪ್ರಕಾರ ಪ್ರಮುಖ ಮಾನದಂಡಗಳು ಹೀಗಿವೆ:
🔹 ಜನಸಂಖ್ಯೆ ಮಾನದಂಡ
ಹೊಸ ಗ್ರಾಮ ಪಂಚಾಯತ್ ರಚನೆಗೆ ಸಾಮಾನ್ಯವಾಗಿ ಕನಿಷ್ಠ 5,000 ರಿಂದ 7,000 ಜನಸಂಖ್ಯೆ ಇರಬೇಕು. ಕಡಿಮೆ ಜನಸಂಖ್ಯೆಯ ಪ್ರದೇಶಗಳನ್ನು ಒಟ್ಟುಗೂಡಿಸಲಾಗುತ್ತದೆ.
🔹 ಭೌಗೋಳಿಕ ವ್ಯಾಪ್ತಿ ಮತ್ತು ದೂರ
ಗ್ರಾಮಗಳು ಪರಸ್ಪರ ಹೆಚ್ಚು ದೂರದಲ್ಲಿದ್ದು, ಆಡಳಿತ ಸುಗಮವಾಗದ ಪರಿಸ್ಥಿತಿ ಇದ್ದರೆ ಪ್ರತ್ಯೇಕ ಪಂಚಾಯತ್ಗೆ ಪರಿಗಣನೆ ನೀಡಲಾಗುತ್ತದೆ.
🔹 ಆಡಳಿತ ಸುಗಮತೆ
ಒಂದು ಪಂಚಾಯತ್ ವ್ಯಾಪ್ತಿ ತುಂಬಾ ದೊಡ್ಡದಾಗಿ, ಜನರಿಗೆ ಮೂಲಭೂತ ಸೇವೆಗಳು ಸರಿಯಾಗಿ ತಲುಪದಿದ್ದರೆ, ವಿಭಜನೆ ಅಗತ್ಯವಾಗುತ್ತದೆ.
🔹 ಆರ್ಥಿಕ ಸಾಮರ್ಥ್ಯ (ಆದಾಯ ಮೂಲಗಳು)
ಹೊಸ ಪಂಚಾಯತ್ ತನ್ನ ಖರ್ಚುಗಳನ್ನು ನಿರ್ವಹಿಸಲು ತೆರಿಗೆ, ಶುಲ್ಕಗಳ ಮೂಲಕ ಆದಾಯ ಸಂಪಾದಿಸುವ ಸಾಮರ್ಥ್ಯ ಹೊಂದಿರಬೇಕು.
🔹 ಸ್ಥಳೀಯ ಜನರ ಬೇಡಿಕೆ
ಗ್ರಾಮಸ್ಥರಿಂದ ಪ್ರತ್ಯೇಕ ಪಂಚಾಯತ್ ಬೇಡಿಕೆ ಬಂದಿರಬೇಕು. ಗ್ರಾಮ ಸಭೆಯ ನಿರ್ಣಯ ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿದೆ.
🔹 ಸರ್ಕಾರದ ಪರಿಶೀಲನೆ ಮತ್ತು ಅನುಮೋದನೆ
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನೆಯ ನಂತರ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಈ ಎಲ್ಲಾ ಮಾನದಂಡಗಳನ್ನು ಪೂರೈಸಿದಾಗ ಮಾತ್ರ ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆಗೆ ಸರ್ಕಾರ ಅನುಮತಿ ನೀಡುತ್ತದೆ





m

