ಸುಳ್ಯ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯು ದಿನಾಂಕ ಮಾಚ್೯ 31 ರಂದು ಕುಮಾರಿ ಭಾಗೀರತಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕುಟೆಲ್, ಅಬ್ದುಲ್ ರಝಕ್, ಪ್ರಗತಿ, ವಿಜಯ, ಜಯರಾಮ, ಸುರೇಶ್ ಕಾಮತ್, ಗಿರೀಶ್ ಪಡ್ಡಂಬೈಲ್, ಸಂಜೀವ ಬಡ್ಡೇಕಲ್ಲು ಹಾಗೂ ರಾಧಾಕೃಷ್ಣ ಪಾರಿವಾರಕಾನ ಉಪಸ್ಥಿತರಿದ್ದರು.
ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನವೀನ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿ, ವಿವಿಧ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿ ಚರ್ಚೆ ನಡೆಸಿದರು.
ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ಧಿ, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಹಾಗೂ ವಿವಿಧ ಸಮಸ್ಯೆಗಳ ಪರಿಹಾರ ಕುರಿತಾಗಿ ವಿಶ್ಲೇಷಣೆ ನಡೆಯಿತು. ವಿಶೇಷವಾಗಿ ರೋಗಿಗಳಿಗೆ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟ, ಔಷಧಿ ಪೂರೈಕೆ, ಸಿಬ್ಬಂದಿ ಕೊರತೆ ಹಾಗೂ ಮೂಲಸೌಕರ್ಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು.
ರೋಗಿಗಳಿಗೆ ಇನ್ನಷ್ಟು ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯರು ಸಲಹೆಗಳನ್ನು ನೀಡಿದರು

ಸಾಮಾನ್ಯ ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ಧಿ, ಸೇವೆಗಳ ಸುಧಾರಣೆ ಹಾಗೂ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದಂತೆ ತೆಗೆದ ಪ್ರಮುಖ ನಿರ್ಣಯಗಳು
ಸಭೆಯಲ್ಲಿ ಆಸ್ಪತ್ರೆಯ ವಾಷಿಂಗ್ ಮೆಷಿನ್ ದುರಸ್ತಿ ಕುರಿತು ಚರ್ಚೆ ನಡೆಯಿತು. “ಅರುಣ ಎಂಟರ್ಪ್ರೈಸಸ್” ಮೂಲಕ ರೂ. 65,195 ವೆಚ್ಚದಲ್ಲಿ ನಡೆದ ದುರಸ್ತಿ ಕಾರ್ಯಕ್ಕೆ ಘಟನೋತ್ತರ ಮಂಜೂರಾತಿ ನೀಡಲಾಯಿತು.
ಹೊಸ ಶವಗಾರ ಕೊಠಡಿಗೆ ರಸ್ತೆ ನಿರ್ಮಾಣದ ಅಗತ್ಯತೆ ಗುರುತಿಸಿ, ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಶಾಸಕರು ಸಂಬಂಧಿತ ಇಲಾಖೆಗೆ ಸೂಚನೆ ನೀಡಿದರು.
ಗ್ರೂಪ್-ಡಿ ನೌಕರರ ಟೆಂಡರ್ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ, ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ನೌಕರರನ್ನು ಮುಂದುವರಿಸಲು ಸಭೆ ತೀರ್ಮಾನಿಸಿತು.
ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಔಷಧಗಳ ಕೊರತೆಯನ್ನು ಮನಗಂಡು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ದರಪಟ್ಟಿಯ ಮೂಲಕ ಔಷಧ ಹಾಗೂ ಲ್ಯಾಬ್ ಸಾಮಗ್ರಿಗಳನ್ನು ಖರೀದಿಸಲು ಅನುಮತಿ ನೀಡಲಾಯಿತು.
ಡಯಾಲಿಸಿಸ್, ಎ.ಬಿ.ಎ.ಆರ್.ಕೆ ಹಾಗೂ ಎಕ್ಸ್-ರೇ ವಿಭಾಗಗಳಲ್ಲಿ ಬ್ಯಾಟರಿ ದುರಸ್ತಿ ಮತ್ತು ಚೇಂಜ್ಓವರ್ ಸ್ವಿಚ್ ಬದಲಾವಣೆ ಕಾರ್ಯಗಳಿಗೆ ಸಂಬಂಧಿಸಿದ ವೆಚ್ಚಕ್ಕೂ ಘಟನೋತ್ತರ ಮಂಜೂರಾತಿ ನೀಡಲಾಯಿತು.
ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಕುರಿತು ಶಾಸಕರ ಗಮನ ಸೆಳೆಯಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಶಾಸಕರ ದೂರವಾಣಿ ಅನುಮತಿ ಮೇರೆಗೆ ಹೊಸ ಇಸಿಜಿ (ECG) ಯಂತ್ರ ಖರೀದಿಸಲಾಗಿದ್ದು, ಇದಕ್ಕೂ ಸಭೆಯಲ್ಲಿ ಮಂಜೂರಾತಿ ದೊರಕಿತು.
ಆಸ್ಪತ್ರೆಯ ಆವರಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್ ಮತ್ತು ಜನಔಷಧ ಕೇಂದ್ರಕ್ಕೆ ಸಂಬಂಧಿಸಿದಂತೆ ಉಚಿತ ಕಟ್ಟಡ, ವಿದ್ಯುತ್ ಹಾಗೂ ನೀರಿನ ಸೌಲಭ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಹಿನ್ನೆಲೆಯಲ್ಲಿ ಜನಔಷಧಿ ಕೇಂದ್ರಕ್ಕೆ ತಿಂಗಳಿಗೆ ರೂ. 1,000 ಬಾಡಿಗೆ ನಿಗದಿಪಡಿಸಲು ನಿರ್ಧರಿಸಲಾಗಿದ್ದು, ಕ್ಯಾಂಟೀನ್ಗೆ ಹೊಸ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.
ಹಿಂದಿನ ಸಭೆಯ ನಿರ್ಣಯಗಳ ಅನುಸಾರ, ಐಸಿಯು ಮತ್ತು ಓಟಿ ವಿಭಾಗಗಳಿಗೆ ಸಂಚಾರಿ ದೂರವಾಣಿ ಸೌಲಭ್ಯ ಒದಗಿಸಲಾಗಿದೆ. ಹೆರಿಗೆ ನಂತರದ ವಾರ್ಡ್ ಅನ್ನು 10 ಹಾಸಿಗೆಗಳ ಮೂಲಕ ವಿಸ್ತರಿಸಲಾಗಿದ್ದು, ನೀರಿನ ಟ್ಯಾಂಕ್ ಮತ್ತು ಶೌಚಾಲಯಗಳ ದುರಸ್ತಿ ಕಾರ್ಯವೂ ಪೂರ್ಣಗೊಂಡಿದೆ.
ಇತರೆ ವಿಚಾರಗಳಲ್ಲಿ, ಎಲುಬು ಮತ್ತು ಕೀಲು ತಜ್ಞರ ಕೊರತೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು. ಎಕ್ಸ್ರೇ ತಾಂತ್ರಿಕ ಸಿಬ್ಬಂದಿಯ ರಜೆ ಅವಧಿಯಲ್ಲಿ ಪುತ್ತೂರು ಆಸ್ಪತ್ರೆಯಿಂದ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಆಸ್ಪತ್ರೆಗೆ ಒಂದೇ ಪ್ರವೇಶ ದ್ವಾರ ಇರುವ ಹಿನ್ನೆಲೆ, ಮತ್ತೊಂದು ದ್ವಾರ ನಿರ್ಮಾಣದ ಅಗತ್ಯತೆ ಕುರಿತು ಚರ್ಚೆ ನಡೆಯಿತು. ಜೊತೆಗೆ, ಬಟ್ಟೆ ಒಗೆಯುವ ಹಾಗೂ ಒಣಗಿಸುವ ಸೌಲಭ್ಯಕ್ಕಾಗಿ ಶೀಟ್ ಅಳವಡಿಸಲು ಸಭೆ ನಿರ್ಧರಿಸಿತು.
ಒಟ್ಟಾರೆ, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ದಿಸೆಯಲ್ಲಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.





m
