ಇತರೆ, ಸ್ಥಳೀಯ

ವಾಟ್‌ಸ್ಆಪ್ ಮೂಲಕ ಮೊಬೈಲ್ ರೀಚಾರ್ಜ್ ಸೌಲಭ್ಯ: ಮೆಟಾ ಹೊಸ ವ್ಯವಸ್ಥೆ ಪರಿಚಯ

ನವದೆಹಲಿ: ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಮೆಟಾ ತನ್ನ ಜನಪ್ರಿಯ ಮೆಸೇಜಿಂಗ್ ವೇದಿಕೆ ವಾಟ್‌ಸ್ಆಪ್ ಮೂಲಕ ಮೊಬೈಲ್ ರೀಚಾರ್ಜ್ ಸೌಲಭ್ಯವನ್ನು ಭಾರತದಲ್ಲಿ ಪರಿಚಯಿಸಿದೆ. ಈ ಹೊಸ ವ್ಯವಸ್ಥೆಯಿಂದ ಬಳಕೆದಾರರು ಇನ್ನು ಮುಂದೆ ಗೂಗಲ್ ಪೇ ಅಥವಾ ಫೋನ್‌ಪೇ ಸೇರಿದಂತೆ ಇತರ ಆ್ಯಪ್‌ಗಳನ್ನು ಅವಲಂಬಿಸುವ ಅಗತ್ಯವಿಲ್ಲ.
ನೆದರ್‌ಲ್ಯಾಂಡ್ಸ್‌ ಮೂಲದ ಪಾವತಿ ಕಂಪನಿಯೊಂದರ ಸಹಕಾರದೊಂದಿಗೆ ಈ ಸೇವೆ ಜಾರಿಗೆ ತಂದಿರುವ ವಾಟ್‌ಸ್ಆಪ್, ಪ್ರಿಪೇಡ್ ಮೊಬೈಲ್ ಸಂಖ್ಯೆಗಳ ರೀಚಾರ್ಜ್ ಅನ್ನು ನೇರವಾಗಿ ಆ್ಯಪ್‌ನಲ್ಲೇ ಮಾಡಲು ಅವಕಾಶ ಕಲ್ಪಿಸಿದೆ. ಏರ್ಟೆಲ್, ಜಿಯೋ ಮತ್ತು ವೋಡಾಫೋನ್ ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಸೇವಾದಾತಗಳ ಯೋಜನೆಗಳು ಈ ಸೌಲಭ್ಯದಲ್ಲಿ ಲಭ್ಯವಾಗಲಿವೆ.
ಈಗಾಗಲೇ ಮೆಟ್ರೋ ಟಿಕೆಟ್ ಬುಕ್ಕಿಂಗ್, ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿರುವ ವಾಟ್‌ಸ್ಆಪ್, ರೀಚಾರ್ಜ್ ಆಯ್ಕೆಯನ್ನು ಸೇರಿಸುವ ಮೂಲಕ ಸಂಪೂರ್ಣ ಡಿಜಿಟಲ್ ಸೇವಾ ವೇದಿಕೆಯಾಗಿ ರೂಪುಗೊಳ್ಳಲು ಮುಂದಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಸೌಲಭ್ಯ ಹಂತ ಹಂತವಾಗಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ರೀಚಾರ್ಜ್ ಮಾಡುವ ವಿಧಾನ

ಬಳಕೆದಾರರು ವಾಟ್‌ಸ್ಆಪ್ ಆ್ಯಪ್‌ನಲ್ಲಿ ಕ್ಯಾಮೆರಾ ಐಕಾನ್ ಸಮೀಪದಲ್ಲಿರುವ ರೂಪಾಯಿ ಚಿಹ್ನೆಯನ್ನು ಕ್ಲಿಕ್ ಮಾಡಿ, ಮೆನುವಿನಲ್ಲಿ “ಮೊಬೈಲ್ ಪ್ರಿಪೇಡ್ ರೀಚಾರ್ಜ್” ಆಯ್ಕೆ ಮಾಡಬೇಕು. ನಂತರ ರೀಚಾರ್ಜ್ ಮಾಡಬೇಕಾದ ಮೊಬೈಲ್ ಸಂಖ್ಯೆ ಮತ್ತು ಟೆಲಿಕಾಂ ಆಪರೇಟರ್ ನಮೂದಿಸಿ, ಬೇಕಾದ ಪ್ಲಾನ್ ಆಯ್ಕೆ ಮಾಡಬಹುದು. ಯುಪಿಐ, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ ರೀಚಾರ್ಜ್ ಪೂರ್ಣಗೊಳಿಸಬಹುದು.
ಈ ಹೊಸ ವ್ಯವಸ್ಥೆಯಿಂದ ಬಳಕೆದಾರರಿಗೆ ಇನ್ನಷ್ಟು ಸುಲಭ ಮತ್ತು ವೇಗದ ಡಿಜಿಟಲ್ ಅನುಭವ ದೊರೆಯುವ ನಿರೀಕ್ಷೆ ಇದೆ.

 

Related Posts