ಶಾಲೆಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪು ಧರಿಸುವುದರ ಮೇಲಿನ ನಿಷೇಧವನ್ನು ಹಿಂಪಡೆದ ಸರ್ಕಾರದ ಕ್ರಮವು ಭಾರತದ ಸಂವಿಧಾನ ಮೌಲ್ಯಗಳು, ಜಾತ್ಯತೀತತೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಹಿಷ್ಣುತೆಯ ತತ್ವಗಳಿಗೆ ಗೌರವ ಸಲ್ಲಿಸುವ ಮಹತ್ವದ ನಿರ್ಧಾರವಾಗಿದೆ ಎಂದು ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ.ಎಸ್. ಕ್ರಮವನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದ್ದು, ಇಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮ, ಸಂಸ್ಕೃತಿ ಹಾಗೂ ನಂಬಿಕೆಗಳನ್ನು ಸಂವಿಧಾನಬದ್ಧವಾಗಿ ಪಾಲಿಸುವ ಹಕ್ಕು ಇದೆ. ಶಿಕ್ಷಣ ಸಂಸ್ಥೆಗಳು ಜ್ಞಾನ, ಸಮಾನತೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಕೇಂದ್ರಗಳಾಗಬೇಕು ಹೊರತು ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಸ್ಥಳಗಳಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪು ಧರಿಸುವುದು ಅನೇಕ ವಿದ್ಯಾರ್ಥಿನಿಯರ ನಂಬಿಕೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದ್ದು, ಅದನ್ನು ನಿರ್ಬಂಧಿಸುವುದು ಮೂಲಭೂತ ಹಕ್ಕುಗಳ ಕುರಿತ ಚರ್ಚೆಗೆ ಕಾರಣವಾಗಿತ್ತು. ಇದೀಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಸಮಾಜದಲ್ಲಿ ಪರಸ್ಪರ ನಂಬಿಕೆ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಗೌರವವನ್ನು ಕಾಪಾಡುವುದು ಪ್ರತಿಯೊಂದು ಜನತಾಂತ್ರಿಕ ಸರ್ಕಾರದ ಜವಾಬ್ದಾರಿಯಾಗಿದೆ. ವಿಭಿನ್ನ ಧರ್ಮ, ಭಾಷೆ, ಸಂಸ್ಕೃತಿಗಳ ನಡುವೆ ಪರಸ್ಪರ ಗೌರವ ಮತ್ತು ಸಹಿಷ್ಣುತೆ ಬೆಳೆಸುವ ಕ್ರಮಗಳು ಸಮಾಜದ ಒಗ್ಗಟ್ಟಿಗೆ ಅಗತ್ಯವಾಗಿದ್ದು, ಸರ್ಕಾರದ ಈ ತೀರ್ಮಾನವು ಅದಕ್ಕೆ ಪೂರಕವಾಗಿದೆ ಎಂದು ಉಮ್ಮರ್ ಕೆ.ಎಸ್. ತಿಳಿಸಿದ್ದಾರೆ





m
