Featured, ಇತರೆ, ಸ್ಥಳೀಯ

ಡಿಕೆ ಶಿವಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ: ಸಭೆಯಲ್ಲಿ ಕೆಲಕಾಲ ಗೊಂದಲ, ಬಳಿಕ ಸರ್ವಾನುಮತ ಆಯ್ಕೆ

ಬೆಂಗಳೂರು, ಮೇ 30: ರಾಜ್ಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ನೂತನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆ ಪ್ರಕ್ರಿಯೆ ವೇಳೆ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಗಮನಸೆಳೆಯಿತು.

ಸಭೆಯ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಸ್ತಾಪಿಸಿ ಒನ್‌ಲೈನ್ ನಿರ್ಣಯ ಮಂಡಿಸಿದರು. ಇದಕ್ಕೆ ಹಿರಿಯ ನಾಯಕ ಡಾ.ಜಿ. ಪರಮೇಶ್ವರ್ ಅನುಮೋದನೆ ನೀಡಿದರು. ಆದರೆ ಕೆಲ ಶಾಸಕರು ನೇರ ಒಪ್ಪಿಗೆ ಸೂಚಿಸುವ ಬದಲು “ಎಐಸಿಸಿ ಸೂಚಿಸುವವರಿಗೆ ನಮ್ಮ ಬೆಂಬಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಕ್ಷಣಿಕ ಗೊಂದಲ ಉಂಟಾಯಿತು. ಈ ಹಿನ್ನೆಲೆಯಲ್ಲಿ ಸಭೆಗೆ ಸುಮಾರು ಐದು ನಿಮಿಷಗಳ ವಿರಾಮ ನೀಡಲಾಯಿತು.

ಇದಾದ ಬಳಿಕ ಸಿದ್ದರಾಮಯ್ಯ ಅವರು ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ತೆರಳಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ಸಭೆಗೆ ಮರಳಿದ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆಯ್ಕೆ ಪ್ರಕ್ರಿಯೆಯನ್ನು ಅಲ್ಲಿಯೇ ಪೂರ್ಣಗೊಳಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ.

ಬಳಿಕ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿದ್ದ ಶಾಸಕರು ಸಮ್ಮತಿ ಸೂಚಿಸಿದ್ದು, ಡಿ.ಕೆ. ಶಿವಕುಮಾರ್ ಅವರ ಆಯ್ಕೆ ಅಧಿಕೃತವಾಗಿ ಪೂರ್ಣಗೊಂಡಿತು.

ಇದೇ ವೇಳೆ 2023ರ ವಿಧಾನಸಭಾ ಚುನಾವಣೆಯ ಬಳಿಕ ಸರ್ಕಾರ ರಚನೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಶಾಸಕಾಂಗ ಪಕ್ಷದ ನಾಯಕರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದರು. ಇದೀಗ ಸಿದ್ದರಾಮಯ್ಯ ಅವರು ಕೂಡ ಅದೇ ಮಾದರಿಯನ್ನು ಅನುಸರಿಸಿದ್ದು, ರಾಜಕೀಯ ವಲಯದಲ್ಲಿ ಇದು ಚರ್ಚೆಗೆ ಕಾರಣವಾಗಿದೆ.

m

Related Posts