Featured, ಇತರೆ, ಸ್ಥಳೀಯ

ಕೌತುಕ : ಪಾರದರ್ಶಕ ತಲೆಯ ಅಪರೂಪದ ಮೀನು: ಸಮುದ್ರದ ಆಳದ “ಬ್ಯಾರೆಲ್ ಐ ಫಿಶ್”!

ಸಮುದ್ರದ ಆಳದಲ್ಲಿ ಕಂಡುಬರುವ ವಿಚಿತ್ರ ಜೀವಿಗಳಲ್ಲಿ ಅತ್ಯಂತ ಕುತೂಹಲ ಹುಟ್ಟಿಸುವುದು ಬ್ಯಾರೆಲ್ ಐ ಫಿಶ್”! ಪಾರದರ್ಶಕ ತಲೆ, ಮೇಲಕ್ಕೆ ನೋಡುತ್ತಿರುವ ಕಣ್ಣಿನ ರಚನೆ ಮತ್ತು ಕತ್ತಲೆಯ ಸಮುದ್ರದಲ್ಲಿ ಬದುಕುವ ಸಾಮರ್ಥ್ಯ—ಇವೆಲ್ಲವೂ ಈ ಮೀನುಗಳನ್ನು ವಿಶೇಷವಾಗಿಸುತ್ತವೆ.

ಮನುಷ್ಯ ತಂತ್ರಜ್ಞಾನದಲ್ಲೂ ವಿಜ್ಞಾನದಲ್ಲೂ ಎಷ್ಟೇ ಆಳಕ್ಕೆ ಹೋದರೂ, ಸೃಷ್ಟಿ ತನ್ನ ಅನಂತ ಕೌತುಕವನ್ನು ಜಗತ್ತಿಗೆ ಇನ್ನೂ ತೆರೆದಿಡುತ್ತಲೇ ಇರುತ್ತದೆ. ಬಂಗುಡೆ, ಬೂತಾಯಿ, ಅಂಜಲ್ ಸಾರಿನಂತಹ ಮೀನಿನ ಬಗ್ಗೆ ತಿಳಿದಿರುವ ನಮಗೆ, ಸಮುದ್ರದ ಆಳದಲ್ಲಿ ಬದುಕುವ “ಬ್ಯಾರೆಲ್ ಐ ಫಿಶ್” ನೋಡಿದಾಗ — ನಾವು ಪ್ರಕೃತಿಯ ಬಗ್ಗೆ ಇನ್ನೂ ಎಷ್ಟು ಕಡಿಮೆ ತಿಳಿದಿದ್ದೇವೆ ಎಂಬುದು ಅರ್ಥವಾಗುತ್ತದೆ.

ಬ್ಯಾರೆಲ್ ಐ ಫಿಶ್”

ಸಮುದ್ರದ ಸಾವಿರಾರು ಅಡಿ ಆಳದಲ್ಲಿ ಸೂರ್ಯನ ಬೆಳಕು ತಲುಪದ ಕತ್ತಲೆಯ ಮಧ್ಯೆ ಬದುಕುವ ಒಂದು ವಿಚಿತ್ರ ಮೀನು ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ. ಅದೇ “ಬ್ಯಾರೆಲ್ ಐ ಫಿಶ್”. ಹೆಸರೇ ಹೇಳುವಂತೆ ಇದರ ಕಣ್ಣುಗಳು ಬ್ಯಾರೆಲ್‌ನಂತೆ ಉದ್ದವಾದ ಟ್ಯೂಬ್ ಆಕಾರದಲ್ಲಿದ್ದು, ಸಾಮಾನ್ಯ ಮೀನುಗಳಿಗಿಂತ ಸಂಪೂರ್ಣ ವಿಭಿನ್ನವಾಗಿವೆ.

ಈ ಮೀನಿನ ಅತ್ಯಂತ ಆಶ್ಚರ್ಯದ ಸಂಗತಿ ಎಂದರೆ ಇದರ ತಲೆ ಪಾರದರ್ಶಕವಾಗಿರುವುದು. ತಲೆಯೊಳಗಿನ ಕಣ್ಣುಗಳು ಹಸಿರು ಬಣ್ಣದಂತೆ ಕಾಣುತ್ತವೆ. ಹೊರಗಿನಿಂದ ನೋಡಿದಾಗಲೇ ಒಳಗಿನ ಕಣ್ಣುಗಳ ಚಲನೆ ಕಾಣಿಸಬಹುದು. ಸಾಮಾನ್ಯವಾಗಿ ಕಣ್ಣುಗಳು ಮೇಲಕ್ಕೆ ನೋಡುತ್ತಿರುತ್ತವೆ. ಹೀಗಾಗಿ ಮೇಲ್ಭಾಗದಲ್ಲಿ ತೇಲುವ ಆಹಾರ ಅಥವಾ ಬೇಟೆಯನ್ನು ಸುಲಭವಾಗಿ ಗಮನಿಸಬಹುದು. ಅಗತ್ಯ ಬಂದಾಗ ಕಣ್ಣುಗಳನ್ನು ಮುಂದಕ್ಕೂ ತಿರುಗಿಸಬಹುದು.

ವಿಜ್ಞಾನಿಗಳ ಪ್ರಕಾರ ಈ ಮೀನು ಸುಮಾರು 600 ರಿಂದ 800 ಮೀಟರ್ ಆಳದ ಸಮುದ್ರದಲ್ಲಿ ಕಂಡುಬರುತ್ತದೆ. ಅಲ್ಲಿ ಬೆಳಕು ತುಂಬಾ ಕಡಿಮೆ. ಆದ್ದರಿಂದ ಅತಿ ಸಣ್ಣ ಬೆಳಕನ್ನೂ ಗುರುತಿಸುವಂತೆ ಇದರ ಕಣ್ಣುಗಳು ರೂಪುಗೊಂಡಿವೆ.

ಇದರ ಆಹಾರದಲ್ಲಿ ಸಣ್ಣ ಮೀನುಗಳು ಮತ್ತು ಜೆಲ್ಲಿಫಿಶ್‌ಗಳೂ ಸೇರಿವೆ. ಕೆಲವೊಮ್ಮೆ ಜೆಲ್ಲಿಫಿಶ್‌ನಿಂದ ಆಹಾರ ಕಸಿದುಕೊಳ್ಳುವುದೂ ಇದರ ಚಾತುರ್ಯ. ಗಾತ್ರದಲ್ಲಿ ದೊಡ್ಡದಿಲ್ಲ—ಸಾಮಾನ್ಯವಾಗಿ ಕೆಲವೇ ಇಂಚುಗಳಷ್ಟಿರುತ್ತದೆ. ಆದರೆ ಅದರ ದೇಹರಚನೆ ಮಾತ್ರ ಸಮುದ್ರದ ವಿಚಿತ್ರ ರಹಸ್ಯಗಳಲ್ಲಿ ಒಂದಾಗಿದೆ.
ಸಮುದ್ರದ ಆಳದ ಜೀವಿಗಳ ಬಗ್ಗೆ ತಿಳಿದುಕೊಳ್ಳುವ ಪ್ರತಿ ಬಾರಿ ಪ್ರಕೃತಿ ಎಷ್ಟು ಅದ್ಭುತ ಮತ್ತು ರಹಸ್ಯಮಯ ಎಂಬುದು ಮತ್ತೆ ಸಾಬೀತಾಗುತ್ತದೆ. ಪಾರದರ್ಶಕ ತಲೆಯ “ಬ್ಯಾರೆಲ್ ಐ ಫಿಶ್” ಅದಕ್ಕೆ ಜೀವಂತ ಉದಾಹರಣೆ.

ವಿಜ್ಞಾನ ಎಷ್ಟೇ ಮುಂದುವರಿದರೂ, ಸೃಷ್ಟಿಯ ಕೌತುಕಕ್ಕೆ ಅಂತ್ಯವೇ ಇಲ್ಲ.

m

Related Posts