ಅರಂಬೂರು ಹಿದಾಯತುಲ್ ಇಸ್ಲಾಂ ಮದರಸಕ್ಕೆ ಸ್ಮಾರ್ಟ್ ಟಿವಿ ಕೊಡುಗೆ

ಅರಂಬೂರು, ಜೂನ್ 5: ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಸಂಘಟನೆಯ ವತಿಯಿಂದ ಬದರ್ ಜುಮಾ ಮಸೀದಿ ಅರಂಬೂರು ಅಧೀನದ ಹಿದಾಯತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಳ ಸೌಲಭ್ಯಕ್ಕಾಗಿ ಹೊಚ್ಚಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಿ ಇಂದು ಮದರಸ ಕಮಿಟಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಸೀದಿಯ ಖತೀಬರಾದ ಮುಈನುದ್ದೀನ್ ಫೈಝಿ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನದೊಂದಿಗೆ ವಿದ್ಯಾಭ್ಯಾಸ ನಡೆಸುವುದು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ಬದಲಾಗುತ್ತಿರುವ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಪಾಠ ಬೋಧನೆಯ ವಿಧಾನಗಳಲ್ಲೂ ಹೊಸತನ ಅಗತ್ಯವಾಗಿದೆ ಎಂದು ಹೇಳಿದರು. ಸ್ಮಾರ್ಟ್ ಟಿವಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ನೆರವಾಗಲಿವೆ ಎಂದು ಅಭಿಪ್ರಾಯಪಟ್ಟ ಅವರು, ಈ ಸ್ಮಾರ್ಟ್ ಟಿವಿ ಖರೀದಿಗೆ ಸಹಕರಿಸಿದ ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಸಂಘಟನೆಯ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.
ಬದರ್ ಜುಮಾ ಮಸೀದಿ ಅರಂಬೂರು ಇದರ ಅಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್ ಅರಂಬೂರು ಅವರು ರಿಮೋಟ್ ಮುಖಾಂತರ ಸ್ಮಾರ್ಟ್ ಟಿವಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಸೀದಿ ಕಮಿಟಿಯ ಸದಸ್ಯರು, ಜಮಾಅತರು, ಪೋಷಕರು ಹಾಗೂ ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಸಂಘಟನೆಯ ಕಾರ್ಯದರ್ಶಿ ನಿಸಾರ್ ಶೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಲಾಯಿತು.





m
