“ದೇಶಪ್ರೇಮವು ಇಮಾನ್ನ ಒಂದು ಭಾಗ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಿಸೋಣ”:- ಕೆ ಹೆಚ್ ಮಹಮ್ಮದ್ ಅಶ್ರಫಿ
ಸುಳ್ಯ: ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಯಾತುಲ್ ಇಸ್ಲಾಂ ಮದ್ರಸ ಜಾಲ್ಸೂರು ಅಡ್ಕಾರು ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮದ್ರಸ ವಠಾರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷರಾದ ಪಿ.ಎಸ್. ಅಬ್ದುಲ್ ರಹಿಮಾನ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮವನ್ನು ಜಮಾಅತ್ ಖತೀಬ್ ಸಜ್ಜಾದ್ ಹಿಮಮಿ ಸಖಾಫಿ ಉದ್ಘಾಟಿಸಿದರು.
ಹಯಾತುಲ್ ಇಸ್ಲಾಂ ಮದ್ರಸದ ಮುಖ್ಯೋಪಾಧ್ಯಾಯರು, ಯುವ ವಿದ್ವಾಂಸ ಹಾಗೂ ಕನ್ನಡ ಭಾಷಣ ರಂಗದ ಚತುರ ಕೆ.ಎಚ್. ಮಹಮ್ಮದ್ ಆಶ್ರಫಿ ಅವರು ಸಂದೇಶ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ನಾಯಕರ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮುಸ್ಲಿಂ ನಾಯಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದು, ಅವರ ಸೇವೆ ಮತ್ತು ದೇಶಪ್ರೇಮವನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ದೇಶಪ್ರೇಮವು ಇಮಾನ್ನ ಒಂದು ಭಾಗವಾಗಿದ್ದು, ಪ್ರತಿಯೊಬ್ಬ ನಾಗರಿಕನು ದೇಶದ ಏಕತೆ, ಸೌಹಾರ್ದತೆ ಹಾಗೂ ಶಾಂತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಯುವಜನತೆ ದೇಶದ ಭವಿಷ್ಯವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ಧರ್ಮ, ಜಾತಿ ಹಾಗೂ ಭಾಷೆಯ ಭೇದವಿಲ್ಲದೆ ಎಲ್ಲರೂ ಸಹೋದರತ್ವದಿಂದ ಬದುಕುವುದೇ ನಿಜವಾದ ಸ್ವಾತಂತ್ರ್ಯದ ಸಾರ್ಥಕತೆ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಅಬ್ದುಲ್ ಖಾದರ್, ಉಪಕಾರ್ಯದರ್ಶಿ ಒಮಾನ್ ಅಬ್ದುಲ್ಲಾ, ಅಬ್ಬಾಸ್ ಫೈಝಿ, ಹಿರಿಯ ನಾಯಕರು, ಜಮಾಅತ್ ಸದಸ್ಯರು, ಊರಿನವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ SYS ಜಾಲ್ಸೂರು ಅಡ್ಕಾರು ಯೂನಿಟ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
![]()