Featured, ಸ್ಥಳೀಯ

ಪಣಕಜೆ ಟೋಲ್ ಗೇಟ್ ಕೈಬಿಡದಿದ್ದರೆ ತೀವ್ರ ಜನಾಂದೋಲನ: ರಶೀದ್ ಬೆಳ್ತಂಗಡಿ

“ಬೆಳ್ತಂಗಡಿ ತಾಲೂಕಿಗೆ ಮತ್ತೊಂದು ಟೋಲ್ ಗೇಟ್ ಅಗತ್ಯವಿಲ್ಲ. ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಪಣಕಜೆ ಟೋಲ್ ಗೇಟ್ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು.

ಬೆಳ್ತಂಗಡಿ, ಅ. 8: ಮಂಗಳೂರು–ಕಡೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆ ಕಾಮಗಾರಿಯ ಭಾಗವಾಗಿ ಬೆಳ್ತಂಗಡಿ ತಾಲೂಕಿನ ಪಣಕಜೆ ಸಮೀಪ ಟೋಲ್ ಗೇಟ್ ನಿರ್ಮಿಸುವ ಪ್ರಸ್ತಾವನೆಗೆ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ರಶೀದ್ ಬೆಳ್ತಂಗಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

“ಬೆಳ್ತಂಗಡಿ ತಾಲೂಕಿಗೆ ಮತ್ತೊಂದು ಟೋಲ್ ಗೇಟ್ ಅಗತ್ಯವಿಲ್ಲ. ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಪಣಕಜೆ ಟೋಲ್ ಗೇಟ್ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ತಾಲೂಕಿನ ಜನರನ್ನು ಒಗ್ಗೂಡಿಸಿ ತೀವ್ರ ಜನಾಂದೋಲನ ರೂಪಿಸಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.

ಬಂಟ್ವಾಳದ ಬ್ರಹ್ಮರಕೊಟ್ಲು ಟೋಲ್ ಗೇಟ್‌ಗೆ ಪರ್ಯಾಯವಾಗಿ ಪಣಕಜೆಯಲ್ಲಿ ಟೋಲ್ ಗೇಟ್ ನಿರ್ಮಿಸುವ ಪ್ರಸ್ತಾವನೆ ಇದೆ ಎಂಬ ಚರ್ಚೆಗಳ ಕುರಿತು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಟೋಲ್ ಗೇಟ್‌ಗೆ ಸ್ಥಳ ಆಯ್ಕೆ ಮಾಡಿದ ಆಧಾರ, ಅದರ ಅಗತ್ಯತೆ, ಅನುಮೋದನಾ ಪ್ರಕ್ರಿಯೆ, ಗುತ್ತಿಗೆ ಹಾಗೂ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಣಕಜೆ ಟೋಲ್ ಗೇಟ್ ನಿರ್ಮಾಣದ ಹಿಂದೆ ರಾಜಕೀಯ ಅಥವಾ ಆರ್ಥಿಕ ಹಿತಾಸಕ್ತಿ ಇದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳ ವಿರುದ್ಧ ಕಮಿಷನ್ ಅಥವಾ ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಆರೋಪಗಳು ಇದ್ದಲ್ಲಿ ಅವುಗಳನ್ನು ದಾಖಲೆ ಆಧಾರದಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ರಶೀದ್ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿಧಾನಗತಿ, ಅವ್ಯವಸ್ಥೆ ಹಾಗೂ ಕಾಮಗಾರಿಯಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಸಾರ್ವಜನಿಕ ಅಸಮಾಧಾನವಿದೆ. ಈ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ನೀಡುವ ಮೊದಲು ಮತ್ತೊಂದು ಟೋಲ್ ಗೇಟ್ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹೇರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟೋಲ್ ಗೇಟ್ ನಿರ್ಮಾಣಕ್ಕೆ ಸಂಸದರು ಆಸಕ್ತಿ ತೋರುತ್ತಿದ್ದಾರೆ ಎಂಬ ವರದಿಗಳ ಬಗ್ಗೆಯೂ ಪ್ರತಿಕ್ರಿಯಿಸಿದ ರಶೀದ್, ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಪಣಕಜೆ ಟೋಲ್ ಗೇಟ್ ವಿಚಾರದಲ್ಲಿ ಸಂಸದರ ನಿಲುವು ಹಾಗೂ ಯೋಜನೆಗೆ ಸಂಬಂಧಿಸಿದ ಅವರ ಪಾತ್ರವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಣಕಜೆ ಟೋಲ್ ಗೇಟ್ ನಿರ್ಮಾಣ ಪ್ರಸ್ತಾವನೆಯ ಕಾನೂನುಬದ್ಧತೆ, ಅನುಮೋದನಾ ಪ್ರಕ್ರಿಯೆ ಹಾಗೂ ಅದರ ಅಗತ್ಯತೆಯನ್ನು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಶೀಲಿಸಬೇಕು. ಈ ಕುರಿತು ತುರ್ತು ಸಭೆ ಕರೆದು ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಇದು ಕೇವಲ ಒಂದು ರಾಜಕೀಯ ಪಕ್ಷದ ಹೋರಾಟವಲ್ಲ; ತಾಲೂಕಿನ ಜನರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯ ವಿರುದ್ಧದ ಹೋರಾಟವಾಗಿದೆ. ಟೋಲ್ ಗೇಟ್ ಪ್ರಸ್ತಾವನೆಯನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ. ಅಗತ್ಯವಿದ್ದಲ್ಲಿ ತಾಲೂಕಿನಾದ್ಯಂತ ಹಂತ ಹಂತವಾಗಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ರಶೀದ್ ಬೆಳ್ತಂಗಡಿ ತಿಳಿಸಿದ್ದಾರೆ.

Related Posts