ಬೆಂಗಳೂರು, ಅ.28: ಜಾಗತಿಕವಾಗಿ ಜನಪ್ರಿಯವಾಗಿರುವ ಮೊಬೈಲ್ ಗೇಮ್ ‘ಕ್ಯಾಂಡಿ ಕ್ರಷ್ ಸಾಗಾ’ದಲ್ಲಿ 23,585ನೇ ಹಂತ ತಲುಪುವ ಮೂಲಕ ಬೆಂಗಳೂರಿನ ಕನ್ನಡಿಗ ಸೂರ್ಯ ರಾಜ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಬಿಹಾರದ ಯುವಕ ಶುಭಂ ಕುಮಾರ್ ಅವರ ಹಿಂದಿನ ಸಾಧನೆಯನ್ನು ಹಿಂದಿಕ್ಕಿರುವ ಸೂರ್ಯ ರಾಜ್, ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯಿಂದ ವಿಶ್ವದಾಖಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಕತ್ರಿಗುಪ್ಪೆ ಮೂಲದ ಸೂರ್ಯ ರಾಜ್ ಅವರು ಕ್ಯಾಂಡಿ ಕ್ರಷ್ ಸಾಗಾದಲ್ಲಿ ಸತತವಾಗಿ ಸಾವಿರಾರು ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 23,585ನೇ ಹಂತ ತಲುಪಿದ್ದಾರೆ. ಅವರ ಸಾಧನೆಯನ್ನು ಗುರುತಿಸಿರುವ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಅಕ್ಟೋಬರ್ 16ರಂದು ಪ್ರಮಾಣಪತ್ರ, ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ.
ಬಿಹಾರದ ಯುವಕನ ದಾಖಲೆ ಹಿಂದಿಕ್ಕಿದ ಕನ್ನಡಿಗ
ಈ ಹಿಂದೆ ಬಿಹಾರದ 19 ವರ್ಷದ ಶುಭಂ ಕುಮಾರ್ ಅವರು ಕ್ಯಾಂಡಿ ಕ್ರಷ್ ಸಾಗಾದಲ್ಲಿ 22,222ನೇ ಹಂತ ತಲುಪುವ ಮೂಲಕ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯಲ್ಲಿ ಸ್ಥಾನ ಪಡೆದಿದ್ದರು. ಕಿಶೋರರ ವಿಭಾಗದಲ್ಲಿ ಅತ್ಯುನ್ನತ ಹಂತ ತಲುಪಿದ ಸಾಧನೆಗಾಗಿ ಅವರಿಗೆ ಮಾನ್ಯತೆ ಲಭಿಸಿತ್ತು. ಬಳಿಕ ಅವರು 23,465ನೇ ಹಂತ ತಲುಪಿರುವುದಾಗಿ ವರದಿಯಾಗಿತ್ತು. ಇದೀಗ ಸೂರ್ಯ ರಾಜ್ 23,585ನೇ ಹಂತ ತಲುಪುವ ಮೂಲಕ ಶುಭಂ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.
ಸೂರ್ಯ ರಾಜ್ ಅವರ ಸಾಧನೆಯನ್ನು ಪರಿಶೀಲಿಸಿ ಅನುಮೋದಿಸಿರುವುದಾಗಿ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಾಳ್ಮೆ, ಏಕಾಗ್ರತೆ ಮತ್ತು ನಿರಂತರ ಪ್ರಯತ್ನದ ಫಲ
ಕ್ಯಾಂಡಿ ಕ್ರಷ್ ಸಾಗಾ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಪಝಲ್ ಮಾದರಿಯ ಮೊಬೈಲ್ ಆಟವಾಗಿದೆ. ಒಂದೇ ಬಣ್ಣದ ಕ್ಯಾಂಡಿಗಳನ್ನು ಜೋಡಿಸಿ ನಿಗದಿತ ಗುರಿಗಳನ್ನು ಪೂರೈಸುವ ಮೂಲಕ ಆಟಗಾರರು ಮುಂದಿನ ಹಂತಗಳಿಗೆ ಪ್ರವೇಶಿಸಬೇಕಾಗುತ್ತದೆ. ಆಟ ಮುಂದುವರಿದಂತೆ ಸವಾಲುಗಳೂ ಕಠಿಣವಾಗುತ್ತವೆ.
ಇಂತಹ ಆಟದಲ್ಲಿ ಸಾವಿರಾರು ಹಂತಗಳನ್ನು ಯಶಸ್ವಿಯಾಗಿ ಪೂರೈಸಲು ತಾಳ್ಮೆ, ಏಕಾಗ್ರತೆ ಹಾಗೂ ನಿರಂತರ ಪ್ರಯತ್ನ ಅಗತ್ಯ. ಆರಂಭದಲ್ಲಿ ಮನರಂಜನೆಗಾಗಿ ಆಡುತ್ತಿದ್ದ ಆಟವನ್ನೇ ಸೂರ್ಯ ರಾಜ್ ವೈಯಕ್ತಿಕ ಸಾಧನೆಯಾಗಿ ರೂಪಿಸಿಕೊಂಡಿರುವುದು ವಿಶೇಷವಾಗಿದೆ.
ಡಿಜಿಟಲ್ ತಂತ್ರಜ್ಞಾನ ಮತ್ತು ಮೊಬೈಲ್ ಗೇಮಿಂಗ್ ಕ್ಷೇತ್ರದಲ್ಲಿ ಹೊಸ ಸಾಧನೆಗಳು ದಾಖಲಾಗುತ್ತಿರುವ ಸಂದರ್ಭದಲ್ಲಿ ಕನ್ನಡಿಗ ಸೂರ್ಯ ರಾಜ್ ಅವರ ಸಾಧನೆ ಗಮನ ಸೆಳೆದಿದೆ.
ವೈಯಕ್ತಿಕ ಆಸಕ್ತಿ, ನಿರಂತರ ಅಭ್ಯಾಸ ಹಾಗೂ ಸಾಧಿಸುವ ಛಲ ಇದ್ದರೆ ಮನರಂಜನೆಯ ಕ್ಷೇತ್ರದಲ್ಲಿಯೂ ವಿಶೇಷ ಮೈಲಿಗಲ್ಲು ಸ್ಥಾಪಿಸಬಹುದು ಎಂಬುದಕ್ಕೆ ಸೂರ್ಯ ರಾಜ್ ಅವರ ಸಾಧನೆ ಉದಾಹರಣೆಯಾಗಿದೆ