ಮಂಗಳೂರು: ಹೆಣ್ಣೊಬ್ಬಳು ಶಿಕ್ಷಣ ಪಡೆದರೆ ಕೇವಲ ಒಬ್ಬ ವ್ಯಕ್ತಿ ವಿದ್ಯಾವಂತಳಾಗುವುದಿಲ್ಲ; ಬದಲಾಗಿ ಒಂದು ಕುಟುಂಬ ಜ್ಞಾನದಿಂದ ಬೆಳಗುತ್ತದೆ, ಒಂದು ತಲೆಮಾರು ಸಂಸ್ಕಾರದಿಂದ ರೂಪುಗೊಳ್ಳುತ್ತದೆ. ಮಹಿಳೆಯರ ಶಿಕ್ಷಣವು ವೈಯಕ್ತಿಕ ಪ್ರಗತಿಗೆ ಮಾತ್ರ ಸೀಮಿತವಾಗದೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿಯಾಗುತ್ತದೆ ಎಂಬ ಮಹತ್ವದ ಸಂದೇಶದೊಂದಿಗೆ ಮಂಗಳೂರಿನಲ್ಲಿ ‘EDUVISTA 2026 – A Celebration of Dreams & Achievements’ ಪದವಿ ಪ್ರದಾನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.

ಮಂಗಳೂರಿನ ಜಪ್ಪಿನಮೊಗರಿನ ಓಶಿಯನ್ ಗ್ಲೋಬಲ್ ಸ್ಕೂಲ್ನಲ್ಲಿ ಬ್ಲಿಸ್ ಲಂಡನ್ ಟೀಚರ್ಸ್ ಅಕಾಡೆಮಿ ಹಾಗೂ ಸುಳ್ಯದ ಎಕ್ಸಲೆನ್ಸಿ ಕ್ಲಬ್ನ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಈ ಸಮಾರಂಭವು ಮಹಿಳಾ ಶಿಕ್ಷಣ, ಸ್ವಾವಲಂಬನೆ, ಶಿಕ್ಷಕ ವೃತ್ತಿಯ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಅನಾವರಣಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ (ಎಸಿಪಿ) ನಜ್ಮಾ ಫಾರೂಕಿ, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಪದವಿ ಪಡೆಯುವುದೇ ಶಿಕ್ಷಣದ ಅಂತಿಮ ಗುರಿಯಲ್ಲ. ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ನಿಜವಾದ ಶಿಕ್ಷಣದ ಉದ್ದೇಶ ಎಂದು ಅಭಿಪ್ರಾಯಪಟ್ಟರು. ಶೈಕ್ಷಣಿಕ ಅರ್ಹತೆ ಮತ್ತು ಜೀವನ ಮೌಲ್ಯಗಳು ಜೊತೆಜೊತೆಯಾಗಿಯೇ ಸಾಗಬೇಕು. ವಿದ್ಯಾವಂತ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಿ, ಅದರ ಕಟ್ಟುನಿಟ್ಟಿನ ಪಾಲನೆಗೆ ಆದ್ಯತೆ ನೀಡಬೇಕು. ಶಿಕ್ಷಣವು ವ್ಯಕ್ತಿಯಲ್ಲಿ ಜವಾಬ್ದಾರಿ, ಶಿಸ್ತು ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಂತಾಗಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಬೆಳ್ತಂಗಡಿಯ ಹಿರಿಯ ಪತ್ರಕರ್ತ ಲ. ಅಶ್ರಫ್ ಆಲಿಕುಂಞಿ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿನಿಯರು ಇಂದು ಕೇವಲ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿಲ್ಲ. ಬದಲಾಗಿ ಸಮಾಜದ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಳ್ಳುತ್ತಿದ್ದಾರೆ ಎಂದರು.
ಮಗುವಿನ ಮೊದಲ ಪಾಠಶಾಲೆ ತಾಯಿಯ ಮಡಿಲಾದರೆ, ಅದರ ವ್ಯಕ್ತಿತ್ವಕ್ಕೆ ಹೊಸ ದಿಕ್ಕು ನೀಡುವವರು ಶಿಕ್ಷಕರು. ವಿಶೇಷವಾಗಿ ಬಾಲ್ಯಶಿಕ್ಷಣದ ಹಂತದಲ್ಲಿ ಶಿಕ್ಷಕಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಗುವಿನ ಮನಸ್ಸಿನಲ್ಲಿ ಬಿತ್ತುವ ಜ್ಞಾನ, ಪ್ರೀತಿ, ಶಿಸ್ತು ಹಾಗೂ ಮಾನವೀಯತೆಯ ಬೀಜಗಳೇ ಮುಂದೊಂದು ದಿನ ಸಮಾಜದ ಸ್ವರೂಪವನ್ನು ನಿರ್ಧರಿಸುತ್ತವೆ ಎಂದು ಹೇಳಿದರು.
ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗ ಅಥವಾ ಆದಾಯದ ಮೂಲವಾಗಿ ಪರಿಗಣಿಸಬಾರದು. ಅದು ಮುಂದಿನ ಪೀಳಿಗೆಯನ್ನು ರೂಪಿಸುವ ಪವಿತ್ರ ಸೇವೆಯಾಗಬೇಕು. ಶಿಕ್ಷಕಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಉತ್ತಮ ನಾಗರಿಕರು ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು
ಶಿಕ್ಷಣದಿಂದ ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು
ವಿಶೇಷವಾಗಿ ಶಿಕ್ಷಕ ತರಬೇತಿಯಂತಹ ವೃತ್ತಿಪರ ಶಿಕ್ಷಣವು ಮಹಿಳೆಯರಿಗೆ ಉದ್ಯೋಗಾವಕಾಶಗಳ ದಾರಿಯನ್ನು ತೆರೆಯುವುದರೊಂದಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಲು ನೆರವಾಗುತ್ತದೆ. ಆರ್ಥಿಕ ಸ್ವಾತಂತ್ರ್ಯ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ನಾಯಕತ್ವ ಬೆಳೆಸುವಲ್ಲಿ ಮಹಿಳಾ ಶಿಕ್ಷಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಆಶಯ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.
ಶಿಕ್ಷಕರು ನಾಳಿನ ಭವಿಷ್ಯದ ಶಿಲ್ಪಿಗಳು
ಈ ಮೂವರು ಸಾಧಕಿಯರ ಸೇವೆ ಮತ್ತು ಸಾಧನೆಗಳು ಮಹಿಳೆಯರ ಪ್ರತಿಭೆ, ಪರಿಶ್ರಮ ಹಾಗೂ ದೃಢಸಂಕಲ್ಪಕ್ಕೆ ಸಾಕ್ಷಿಯಾದವು. ಅವಕಾಶ ಮತ್ತು ಪ್ರೋತ್ಸಾಹ ದೊರೆತಾಗ ಮಹಿಳೆಯರು ಶಿಕ್ಷಣ, ಸಮಾಜಸೇವೆ, ಕಲೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯೂ ವಿಶಿಷ್ಟ ಸಾಧನೆ ಮಾಡಬಲ್ಲರು ಎಂಬುದನ್ನು ಈ ಸನ್ಮಾನ ಸಾರಿತು.
ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನ
ಸಮಾರಂಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಭಾಷಣ, ಅನಿಸಿಕೆ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದರು.
ಕಾರ್ಯಕ್ರಮವನ್ನು ನಿಶ್ಚಿತಾ ಶೆಟ್ಟಿ ಮತ್ತು ಆಯಿಷಾ ನುಸೈಬಾ ನಿರೂಪಿಸಿದರು. ಜಿಯಾನಾ ಸ್ವಾಗತ ಭಾಷಣ ಮಾಡಿದರು. ಜಿಯಾನಾ, ಸಂಬ್ರೀನಾ ಹಾಗೂ ತಪ್ಸೀರಾ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರೆಹನಾಜ್, ಅಫೀಝಾ ಮತ್ತು ಹಸೀನಾ ಬೀಳ್ಕೊಡುಗೆ ಭಾಷಣ ಮಾಡಿದರು. ತೈಬಾ ವಂದನಾರ್ಪಣೆ ಸಲ್ಲಿಸಿದರು