Featured, ಇತರೆ

ದುಬೈನಲ್ಲಿ ನ.12 ಮತ್ತು 13ರಂದು ಅಂತಾರಾಷ್ಟ್ರೀಯ ‘ನೋವಾ’ ಹ್ಯಾಕಥಾನ್: ಸುಳ್ಯದ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಿಂದ ಆಯೋಜನೆ

ಸ್ಫಿಯರ್ ಹೈವ್ ಕ್ಲಬ್‌ನ ಸಂಸ್ಥಾಪಕ ನಿರ್ದೇಶಕ ಜಟ್ಟಿಪಳ್ಳದ ಮುಹಮ್ಮದ್ ಅರ್ಷದ್ ಆರ್.ಎ. ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ರಾಹಿಲ್ ನೇತೃತ್ವದ ತಂಡ ದುಬೈಗೆ 

ಸುಳ್ಯ, ನ.11: ಸುಳ್ಯದ ಕೆವಿಜಿ ಕಾಲೇಜ್ ಆಫ್ ಎಂಜಿನಿಯರಿಂಗ್ (KVGCE)ನ ಸ್ಫಿಯರ್ ಹೈವ್ (Sphere Hive) ಕ್ಲಬ್ ವತಿಯಿಂದ ದುಬೈನ ಬಿಟ್ಸ್ ಪಿಲಾನಿ (BITS Pilani) ದುಬೈ ಕ್ಯಾಂಪಸ್‌ನ ಸಹಯೋಗದಲ್ಲಿ ನವೆಂಬರ್ 12 ಮತ್ತು 13ರಂದು ಅಂತಾರಾಷ್ಟ್ರೀಯ ಮಟ್ಟದ 48 ಗಂಟೆಗಳ ‘ನೋವಾ’ (NOVA) ಹ್ಯಾಕಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಬಾಹ್ಯಾಕಾಶ ತಂತ್ರಜ್ಞಾನವೇ ಪ್ರಮುಖ ವಿಷಯ

ಬಾಹ್ಯಾಕಾಶ ತಂತ್ರಜ್ಞಾನ (Space Technology) ಈ ಹ್ಯಾಕಥಾನ್‌ನ ಪ್ರಮುಖ ವಿಷಯವಾಗಿದ್ದು, ಉಪಗ್ರಹ ದತ್ತಾಂಶ (Satellite Data) ಹಾಗೂ ಉಪಗ್ರಹ ಆಧಾರಿತ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ನವೀನ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.

ವಿಶ್ವದ ವಿವಿಧ ದೇಶಗಳಿಂದ ಆಯ್ಕೆಯಾಗಿರುವ ಸುಮಾರು 25ರಿಂದ 30 ಅತ್ಯುತ್ತಮ ತಂಡಗಳು ದುಬೈನಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಸ್ಪರ್ಧೆಯ ವಿಜೇತ ತಂಡಗಳಿಗೆ ಒಟ್ಟು ₹1 ಲಕ್ಷ ಮೊತ್ತದ ನಗದು ಬಹುಮಾನವನ್ನು ನೀಡಲಾಗುವುದು.

ದುಬೈಗೆ ಕೆವಿಜಿಸಿಇ ತಂಡ

ಈ ಅಂತಾರಾಷ್ಟ್ರೀಯ ಹ್ಯಾಕಥಾನ್‌ನ ಆಯೋಜನಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಫಿಯರ್ ಹೈವ್ ಕ್ಲಬ್‌ನ ಸಂಸ್ಥಾಪಕ ಹಾಗೂ ಸ್ಥಾಪಕ ನಿರ್ದೇಶಕ, ಸುಳ್ಯ ಜಟ್ಟಿಪಳ್ಳದ ಯುವಕ ಮುಹಮ್ಮದ್ ಅರ್ಷದ್ ಆರ್.ಎ. ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ರಾಹಿಲ್ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ನಡೆದಿವೆ.

ಹ್ಯಾಕಥಾನ್ ಆಯೋಜನೆಯ ಹಿನ್ನೆಲೆಯಲ್ಲಿ ಕೆವಿಜಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ. ಸುರೇಶ್ ವಿ. ಅವರೊಂದಿಗೆ ಮುಹಮ್ಮದ್ ಅರ್ಷದ್ ಆರ್.ಎ., ಮುಹಮ್ಮದ್ ರಾಹಿಲ್, ಮಾನ್ಯ ಎ., ತನ್ವಿತ್ ಬಿ., ನುಮಾ ಶಂಸುದ್ದೀನ್, ಫಿದಾ ಯೂಸುಫ್ ಹಾಗೂ ಪ್ರತೀಕ್ಷಾ ಗೌಡ ಹೆಚ್.ಎಂ. ಅವರನ್ನು ಒಳಗೊಂಡ ತಂಡವು ನವೆಂಬರ್ 11ರಂದು ದುಬೈಗೆ ಪ್ರಯಾಣ ಬೆಳೆಸಲಿದೆ.

ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆಗೆ ಅಂತಾರಾಷ್ಟ್ರೀಯ ವೇದಿಕೆ:

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಈ ಹ್ಯಾಕಥಾನ್ ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆ, ಸೃಜನಶೀಲತೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಮಹತ್ವದ ಅವಕಾಶ ಕಲ್ಪಿಸಲಿದೆ.

ವಿಶೇಷವಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉಪಗ್ರಹ ದತ್ತಾಂಶದ ಬಳಕೆಯಲ್ಲಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮವು ಸುಳ್ಯದ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಂಘಟನಾ ಸಾಮರ್ಥ್ಯ ಹಾಗೂ ತಾಂತ್ರಿಕ ಚಟುವಟಿಕೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ಒದಗಿಸಲಿದೆ.

Related Posts