ದೊಡ್ಡಬಳ್ಳಾಪುರ : ಕರ್ತವ್ಯದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಭೆಯ ನೆಪದಲ್ಲಿ ಕರೆಸಿ ಸಿನಿಮಾ ಚಿತ್ರೀಕರಣಕ್ಕೆ ಬಳಸಿಕೊಂಡಿರುವ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಫಯಾಜ್ ಅಹಮದ್ ಹಾಗೂ ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್ ಆಗ್ರಹಿಸಿದ್ದಾರೆ.
ನಗರದ ಕೊಡಿಗೇಹಳ್ಳಿ ರಸ್ತೆಯಲ್ಲಿರುವ ಜಾಲಪ್ಪ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕನ್ನಡ ಚಲನಚಿತ್ರದ ಚಿತ್ರೀಕರಣದಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇಲಾಖೆಯ ಕರ್ತವ್ಯದ ಅವಧಿಯಲ್ಲೇ ಕಾರ್ಯಕರ್ತೆಯರನ್ನು ಇಲಾಖಾ ಸಭೆಯ ನೆಪದಲ್ಲಿ ಕರೆಸಿ, ಚಿತ್ರೀಕರಣದಲ್ಲಿ ಭಾಗವಹಿಸುವಂತೆ ಒತ್ತಡ ಹೇರಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಮಕ್ಕಳ ಆರೈಕೆ, ಪೌಷ್ಟಿಕ ಆಹಾರ ವಿತರಣೆ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣದಂತಹ ಜವಾಬ್ದಾರಿಯುತ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಕಾರ್ಯಕರ್ತೆಯರನ್ನು ಈ ರೀತಿ ಸಿನಿಮಾ ಶೂಟಿಂಗ್ಗೆ ಬಳಸಿಕೊಂಡಿರುವುದು ಖಂಡನೀಯ. ಅಷ್ಟೇ ಅಲ್ಲದೆ, ಚಿತ್ರೀಕರಣದ ವೇಳೆ ಕಾರ್ಯಕರ್ತೆಯರನ್ನು ಬಿಸಿಲಿನಲ್ಲಿ ದೀರ್ಘಕಾಲ ಕಾಯಿಸಿ ಅಗೌರವ ತೋರಲಾಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಪ್ರಮುಖ ಯೋಜನೆಗಳನ್ನು ಜನರಿಗೆ ತಲುಪಿಸುವ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಹಾಗೂ ಸಮಯವನ್ನು ಖಾಸಗಿ ಲಾಭ ಅಥವಾ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳಲು ಎಂದಿಗೂ ಅವಕಾಶ ನೀಡಬಾರದು. ಸಭೆಯ ನೆಪವೊಡ್ಡಿ ಇಷ್ಟೊಂದು ಸಂಖ್ಯೆಯ ಕಾರ್ಯಕರ್ತೆಯರನ್ನು ಕರೆಸಿದವರ ಹಿನ್ನೆಲೆ ಮತ್ತು ಇದರ ಹಿಂದಿರುವ ವ್ಯಕ್ತಿಗಳ ಪಾತ್ರವೇನು ಎಂಬುದನ್ನು ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆಯ ಮೂಲಕ ಬಯಲಿಗೆಳೆಯಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು. ಚಿತ್ರೀಕರಣದಲ್ಲಿ ಕಾರ್ಯಕರ್ತೆಯರು ಭಾಗವಹಿಸಲು ಅನುಮತಿ ನೀಡಿದವರು ಯಾರು? ಸಭೆಯ ನೆಪದಲ್ಲಿ ಇವರನ್ನು ಕರೆಸಿಕೊಂಡ ಉದ್ದೇಶವೇನು? ಕರ್ತವ್ಯದ ಅವಧಿಯಲ್ಲಿ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತೇ? ಎಂಬಿತ್ಯಾದಿ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಾರ್ಯಕರ್ತೆಯರ ಹಿತಾಸಕ್ತಿ ಮತ್ತು ಇಲಾಖೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.