Featured, ಇತರೆ

ಸ್ವಚ್ಛತೆ ನಮ್ಮ ಆದ್ಯತೆ: ಸುಳ್ಯ ಜಟ್ಟಿಪಳ್ಳ ಪರಿಸರದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಬೃಹತ್ ಸ್ವಚ್ಛತಾ ಅಭಿಯಾನ

ವಜ್ರಮಹೋತ್ಸವದ ಸಂಭ್ರಮದೊಂದಿಗೆ ಸ್ವಚ್ಛತೆಯ ಸಂದೇಶ; ಹಿರಿಯರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸ್ವಯಂಸೇವಕರ ಸಕ್ರಿಯ ಪಾಲ್ಗೊಳ್ಳುವಿಕೆ

ಸುಳ್ಯ: ವಜ್ರಮಹೋತ್ಸವದ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಸ್ವಚ್ಛತೆ ನಮ್ಮ ಆದ್ಯತೆ’ ಎಂಬ ಘೋಷವಾಕ್ಯದ ಸ್ವಚ್ಛತಾ ಜಾಗೃತಿ ಮಾಸಾಚರಣೆಯ ಅಂಗವಾಗಿ ಜಟ್ಟಿಪಳ್ಳ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನವೆಂಬರ್ 15 ಭಾನುವಾರ ದಂದು ಯಶಸ್ವಿಯಾಗಿ ನಡೆಯಿತು.

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ನೇತೃತ್ವದಲ್ಲಿ ಹಯಾತುಲ್ ಇಸ್ಲಾಂ ಮದರಸ ಕಮಿಟಿ ಜಟ್ಟಿಪಳ್ಳ, ಬುಸ್ತಾನುಲ್ ಉಲೂಂ ಮದರಸ, ಗ್ರೀನ್ ಬಾಯ್ಸ್ ಜಟ್ಟಿಪಳ್ಳ, ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಈ ಅಭಿಯಾನವು ಪರಿಸರ ಸ್ವಚ್ಛತೆಯ ಜೊತೆಗೆ ಸಾಮಾಜಿಕ ಸಾಮರಸ್ಯ ಮತ್ತು ಸಮುದಾಯದ ಒಗ್ಗಟ್ಟಿನ ಸಂದೇಶವನ್ನೂ ಸಾರಿತು.

ಜಟ್ಟಿಪಳ್ಳ ಶಾಲಾ ವಠಾರ, ವಸಂತ ಕಟ್ಟೆ, ಜಟ್ಟಿಪಳ್ಳ ಮದರಸ, ಪ್ರಮುಖ ಅಡ್ಡರಸ್ತೆಗಳು ಹಾಗೂ ಸಾರ್ವಜನಿಕ ಬೀದಿ ವಠಾರಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಹಿರಿಯರು, ಯುವಕರು, ಕಿರಿಯರು ಹಾಗೂ ವಿದ್ಯಾರ್ಥಿಗಳು ಯಾವುದೇ ಭೇದಭಾವವಿಲ್ಲದೆ ಸ್ವಯಂಸೇವಕರಾಗಿ ಉತ್ಸಾಹದಿಂದ ಪಾಲ್ಗೊಂಡು ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.

ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಲ್ಲ, ಬದುಕಿನ ಸಂಸ್ಕೃತಿಯಾಗಬೇಕು

ಸ್ವಚ್ಛತೆ ಎನ್ನುವುದು ಕೇವಲ ಸಂಘ-ಸಂಸ್ಥೆಗಳು ನಡೆಸುವ ಒಂದು ದಿನದ ಅಭಿಯಾನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಬೇಕು ಎಂಬ ಮಹತ್ವದ ಸಂದೇಶವನ್ನು ಈ ಅಭಿಯಾನ ಸಾರಿತು. ನಮ್ಮ ಮನೆ, ಶಾಲೆ, ಮಸೀದಿ, ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸ್ವಚ್ಛತೆಯ ಅರಿವು ಮುಂದಿನ ಪೀಳಿಗೆಗೂ ಸಹಜವಾಗಿ ವರ್ಗಾವಣೆಯಾಗಲು ಸಾಧ್ಯ. ಸ್ವಚ್ಛ ಪರಿಸರವು ಆರೋಗ್ಯಕರ ಸಮಾಜದ ಅಡಿಪಾಯವಾಗಿದ್ದು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜೀವನದ ಸಂಕಲ್ಪವಾಗಬೇಕು ಎಂಬ ಜಾಗೃತಿಯನ್ನು ಅಭಿಯಾನ ಮೂಡಿಸಿತು.

ಸಾಮಾಜಿಕ ಬದ್ಧತೆಗೆ ಮಾದರಿಯಾದ ಸಂಘಟನೆ

ವಜ್ರಮಹೋತ್ಸವದ ಸಂಭ್ರಮದ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಕೇವಲ ವಾರ್ಷಿಕೋತ್ಸವದ ಆಚರಣೆಗಳಿಗೆ ಸೀಮಿತವಾಗದೆ, ಸಮಾಜದ ಒಳಿತಿಗಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂಘಟನೆಯ ಸಾಮಾಜಿಕ ಕಳಕಳಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ವಿವಿಧ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು, ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ನಡೆಸಿದ ಈ ಅಭಿಯಾನವು ಸಮುದಾಯದ ಸಹಬಾಳ್ವೆ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಉತ್ತಮ ನಿದರ್ಶನವಾಯಿತು.

ಸ್ವಚ್ಛತೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಪರಿಸರದ ಮೇಲಿನ ಜವಾಬ್ದಾರಿಯನ್ನು ಪ್ರತಿಯೊಬ್ಬರಲ್ಲೂ ಬೆಳೆಸುವ ಆಶಯದೊಂದಿಗೆ ಈ ಅಭಿಯಾನ ನಡೆಯಿತು

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ.ಬಿ. ಇಬ್ರಾಹಿಂ, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಸಿ.ಎಂ.ಎಸ್., ಸ್ವಚ್ಛತಾ ಆಂದೋಲನದ ಸಂಚಾಲಕ ಹಾಜಿ ಯಾಕೂಬ್ ಎಸ್.ಟಿ., ಪದಾಧಿಕಾರಿಗಳಾದ ಹಾಜಿ ಹನೀಫ್, ಬುಶ್ರಾ ಶಾಫಿ ಕುತ್ತಮೊಟ್ಟೆ, ಹಾಜಿ ಶುಕೂರ್, ಕೆ.ಎಚ್. ಬಶೀರ್, ಸಪ್ನ ಶಂಸುದ್ದೀನ್, ಕೆ.ಬಿ. ನಿರ್ದೇಶಕರು, ಹಾಜಿ ಕೆ.ಎಂ. ಮುಸ್ತಫಾ ಜನತಾ, ಹಾಜಿ ಆದಂ ಕಮ್ಮಾಡಿ, ಹಾಜಿ ಎಸ್. ಅಬ್ದುಲ್ಲಾ ಕಟ್ಟೆಕ್ಕಾರ್, ಹಾಜಿ ಅಬ್ದುಲ್ ಹಮೀದ್ ಜನತಾ, ಹಾಜಿ ಅಬ್ದುಲ್ ಗಫಾರ್ ನಾವೂರು, ಜುನೈದ್ ಎನ್.ಎ., ಶರೀಫ್ ಜಟ್ಟಿಪಳ್ಳ, ಅಬೂಬಕ್ಕರ್ ಎಸ್.ಪಿ., ಅಬ್ದುಲ್ ಲತೀಫ್ ಎಂ.ಕೆ., ಮಜೀದ್ ಕೆ.ಪಿ., ಸಿರಾಜ್ ಫ್ಯಾನ್ಸಿ, ನೌಶಾದ್ ಬಾರ್ಪಣೆ, ಶಹೀದ್ ಪಾರೆ, ಅಬ್ದುಲ್ ಖಾದರ್ ಪಾರೆ ಉಪಸ್ಥಿತರಿದ್ದರು. ಜಟ್ಟಿಪಳ್ಳ ಮದರಸ ಮುಖ್ಯ ಅಧ್ಯಾಪಕ ಲತೀಫ್ ಸಖಾಫಿ ಗೂನಡ್ಕ, ಸಹ ಅಧ್ಯಾಪಕ ಸಿರಾಜ್ ಸಹದಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಶಂಸುದ್ದೀನ್ ಅರಂಬೂರು, ಅಬ್ದುಲ್ ಮಜೀದ್ ಜನತಾ, ಲಯನ್ಸ್ ಅಬ್ದುಲ್ ಹಮೀದ್, ಮುಖಂಡರಾದ ರಾಮಚಂದ್ರ ಪೆಲ್ತಡ್ಕ, ಪ್ರಭಾಕರನ್ ನಾಯರ್ ಸುಳ್ಯ, ಅಬ್ದುಲ್ ಕಲಾಂ, ಜಟ್ಟಿಪಳ್ಳ ಜಮಾಅತ್ ಸಮಿತಿಯ ಗೌರವಾಧ್ಯಕ್ಷ ಅಬೂಬಕ್ಕರ್ ಜೆ.ಎ., ಕಾರ್ಯದರ್ಶಿ ಫೈಝಲ್ ಜಟ್ಟಿಪಳ್ಳ, ಮಹಮ್ಮದ್ ಹಾಜಿ ಬಿ.ಎಂ., ರಶೀದ್ ಜಟ್ಟಿಪಳ್ಳ, ತಾಜುದ್ದೀನ್ ಎಂ.ಎಸ್., ಬಶೀರ್ ಕ್ವಾಲಿಟಿ, ಕಾದರ್ ಕೆ.ಎಚ್., ಶಾಲಿ ಕಟ್ಟೆಕ್ಕಾರ್, ಮಹಮ್ಮದ್ ಪೈಂಟ್ ಜಟ್ಟಿಪಳ್ಳ ಗ್ರೀನ್ ಬಾಯ್ಸ್ ಅಧ್ಯಕ್ಷ ಶಿಹಾಬ್ ಸಿ.ಎ., ಸಿದ್ದೀಕ್ ಬಾರಿಕ್ಕಾಡ್, ಶಿಹಾಬ್ ಶಾ, ಇಮ್ರಾನ್ ಅಮೈ, ಸಮದ್ ಬಾರಿಕ್ಕಾಡ್, ಶಿಹಾಬ್, ಮಹಮ್ಮದ್ ಅಲಿ, ಶಿಹಾಬ್ ಚಿನ್ನು, ಅಮೀರ್ ಕ್ವಾಲಿಟಿ, ಹಂಸ ಸಾಗರ್, ವಿ.ಕೆ. ಮಹಮ್ಮದ್, ರಝಾಕ್ ಅಡ್ಕಾರ್, ರಜುಬಯ್ಯಾ, ಶೈಬಾನ್ ಬಿ.ಎಂ., ಅಶ್ರಫ್ ಫಡೇಶ್, ಇಸ್ಮಾಯಿಲ್ ಇಚ್ಚೂ, ಮುಸ್ತಫಾ ಮುಕ್ರಿ, ಸಿದ್ದೀಕ್ ಕಟ್ಟೆಕ್ಕಾರ್, ಅಕ್ಬರ್ ಕರಾವಳಿ, ಕಬೀರ್ ಜಟ್ಟಿಪಳ್ಳ, , ಸಿದ್ದೀಕ್ ಗೂನಡ್ಕ, ರಫೀಕ್ ನಾವೂರು, ಸಿದ್ದೀಕ್ ಶುಕ್ರಿಯ, ಫೈಝಲ್ ಕಟ್ಟೆಕ್ಕಾರ್, ಅಜೀಜ್ ಕಚ್ಚು, ಅಚ್ಚಾರು ಕಲ್ಲುಮುಟ್ಲು, ರಹೀಂ ನಾರ್ಕೂಡು ಸೇರಿದಂತೆ ಜಟ್ಟಿಪಳ್ಳ ಮದರಸದ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸ್ಥಳೀಯರು ಸ್ವಯಂಸೇವಕರಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.

ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ 150ಕ್ಕೂ ಅಧಿಕ ಸ್ವಯಂಸೇವಕರಿಗೆ ಸಾಂಪ್ರದಾಯಿಕ ಉಪಾಹಾರ ಸತ್ಕಾರ

ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡ ಸುಮಾರು 150ಕ್ಕೂ ಅಧಿಕ ಮಂದಿಗೆ ಜಟ್ಟಿಪಳ್ಳ ಜಮಾಅತ್ ವತಿಯಿಂದ ವಿಶೇಷ ರೀತಿಯಲ್ಲಿ ಸಾಂಪ್ರದಾಯಿಕ ಬೆಳಗಿನ ಉಪಾಹಾರ ಸತ್ಕಾರ ಏರ್ಪಡಿಸಲಾಗಿತ್ತು.

ಜಟ್ಟಿಪಳ್ಳ ಜಮಾಅತ್ ವ್ಯಾಪ್ತಿಯ ಮನೆಮನೆಗಳಿಂದ ಸಿದ್ಧಪಡಿಸಿ ತಂದಿದ್ದ ವಿವಿಧ ಬಗೆಯ ಕರಾವಳಿ,ಕೇರಳ ಸಾಂಪ್ರದಾಯಿಕ ಖಾದ್ಯಗಳನ್ನು ಆತ್ಮೀಯವಾಗಿ ಬಡಿಸಲಾಯಿತು.

ಅಕ್ಕಿ ರೊಟ್ಟಿ, ದಪ್ಪ ರೊಟ್ಟಿ, ಬೆಳ್ಳಪ್ಪಂ, ಕಡುಬು, ತೆಂಗಿನಕಾಯಿ ಕಡುಬು, ದಪ್ಪ ಕಲ್ತಪ್ಪ, ತೆಳ್ಳಗಿನ ಕಲ್ತಪ್ಪ, ನೈಪತ್ತಲ್, ಅಕ್ಕಿ ಪುಟ್ಟು, ನೀರು ದೋಸೆ, ಪೊಳೆ, ಇಡ್ಲಿ, ಸಾದಾ ದೋಸೆ ಸೇರಿದಂತೆ ವೈವಿಧ್ಯಮಯ ಉಪಾಹಾರದೊಂದಿಗೆ ನಾಟಿ ಕೋಳಿ ಸಾರು, ಚಿನ್ನಾ ಮಸಾಲೆ ಹಾಗೂ ಚಟ್ನಿಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬಡಿಸಲಾಯಿತು.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರಿಗೆ ಸ್ಥಳೀಯ ಮನೆಮಂದಿ ಪ್ರೀತಿ, ಆತಿಥ್ಯ ಹಾಗೂ ಆತ್ಮೀಯತೆಯಿಂದ ನೀಡಿದ ಈ ಸಾಂಪ್ರದಾಯಿಕ ಉಪಾಹಾರ ಸತ್ಕಾರವು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸ್ವಚ್ಛತೆಯ ಮೂಲಕ ಪರಿಸರ ಕಾಳಜಿಯನ್ನು ಸಾರಿದ ಅಭಿಯಾನಕ್ಕೆ ಜಟ್ಟಿಪಳ್ಳದ ಜನರ ಸಹಕಾರ ಮತ್ತು ಸಾಮೂಹಿಕ ಆತಿಥ್ಯ ಮತ್ತಷ್ಟು ಮೆರುಗು ನೀಡಿತು.

Related Posts