ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಮಕ್ಕಳ ಮುಂದೆ ಒಂದು ಪಕ್ಷವನ್ನು ಗುರಿಯಾಗಿಸಿ ‘ದರಿದ್ರ ಪಕ್ಷ’ ಎಂದು ಬಣ್ಣಿಸಿರುವುದು ಮತ್ತು ಮಕ್ಕಳಿಂದ ರಾಜಕೀಯ ನಾಯಕರಿಗೆ ಜಯಘೋಷ ಹಾಕಿಸಿರುವುದು ಅತ್ಯಂತ ಖಂಡನೀಯ. ಜನಪ್ರತಿನಿಧಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರ ಇಂತಹ ರಾಜಕೀಯ ನಡೆ ಶಿಕ್ಷಣ ಸಂಸ್ಥೆಗಳ ಘನತೆ ಮತ್ತು ಶಾಲಾ ವಾತಾವರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪೂಂಜಾಲಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ನೂತನ ಸಭಾಭವನ ಸಂಬಂಧಿಸಿದ ಕಾರ್ಯಕ್ರಮದಲ್ಲಿ ವಿರೋಧಿ ಪಕ್ಷದ ಕುರಿತು ರಾಜಕೀಯ ಅಸಮಾಧಾನವನ್ನು ವ್ಯಕ್ತಪಡಿಸಲು ಶಾಲಾ ಮಕ್ಕಳನ್ನೇ ವೇದಿಕೆಯನ್ನಾಗಿ ಬಳಸಿಕೊಂಡಿರುವುದು ಎಷ್ಟು ಸರಿ? ಕಾಂಗ್ರೆಸ್ ಪಕ್ಷದ ವಿರುದ್ಧ ರಾಜಕೀಯ ಟೀಕೆ ಮಾಡುವುದಕ್ಕೆ ಶಾಸಕರಿಗೆ ಸಾಕಷ್ಟು ರಾಜಕೀಯ ವೇದಿಕೆಗಳಿವೆ. ಆದರೆ, ಶಾಲಾ ಮಕ್ಕಳ ಮುಂದೆ ಒಂದು ರಾಜಕೀಯ ಪಕ್ಷವನ್ನು ನಿಂದಿಸುವುದು, ಮತ್ತೊಂದು ಪಕ್ಷದ ನಾಯಕನ ಪರವಾಗಿ ಜಯಘೋಷ ಹಾಕಿಸುವುದು ಯಾವ ರೀತಿಯ ರಾಜಕೀಯ ಸಂಸ್ಕೃತಿ ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು.
ಶಾಲೆಗಳು ಮಕ್ಕಳಿಗೆ ಜ್ಞಾನ, ವೈಜ್ಞಾನಿಕ ಮನೋಭಾವ, ಸಂವಿಧಾನದ ಆಶಯಗಳು, ಸಹಬಾಳ್ವೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಬೇಕಾದ ಪವಿತ್ರ ಸ್ಥಳಗಳಾಗಿವೆ. ಆದರೆ, ಮಕ್ಕಳ ಮುಗ್ಧ ಮನಸ್ಸಿನಲ್ಲಿ ಪಕ್ಷ ರಾಜಕೀಯದ ಭಾವನೆಗಳನ್ನು ಬಿತ್ತುವ ಕೆಲಸಕ್ಕೆ ಶಾಲಾ ವೇದಿಕೆಯನ್ನು ಬಳಸಿಕೊಳ್ಳುವುದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಮಕ್ಕಳಿಗೆ ಶಿಕ್ಷಣದ ಮಹತ್ವ, ದೇಶದ ಸಂವಿಧಾನ ಮತ್ತು ಸಮಾಜದ ಜವಾಬ್ದಾರಿಗಳ ಬಗ್ಗೆ ತಿಳಿಸಬೇಕಾದ ಶಾಸಕರೇ ಪಕ್ಷ ರಾಜಕೀಯದ ಪಾಠ ಮಾಡಿರುವುದು ವಿಪರ್ಯಾಸ.
ರಾಜಕೀಯ ಪಕ್ಷಗಳ ಬಗ್ಗೆ ತಮಗೆ ಬೇಕಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಶಾಸಕರಿಗಿದೆ. ಆದರೆ, ಮಕ್ಕಳನ್ನು ರಾಜಕೀಯ ಪ್ರಚಾರದ ಸಾಧನಗಳನ್ನಾಗಿ ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ಮೇಲಾಟಗಳಿಂದ ಮುಕ್ತವಾಗಿರಿಸಬೇಕು. ಶಾಲಾ ಮಕ್ಕಳನ್ನು ಇಂತಹ ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಶಾಸಕ ಹರೀಶ್ ಪೂಂಜ ಅವರು ಶಾಲಾ ಮಕ್ಕಳ ಮುಂದಿನ ತಮ್ಮ ರಾಜಕೀಯ ಭಾಷಣದ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಅಶ್ಫಾಕ್ ಪೂಂಜಾಲ್ಕಟ್ಟೆ ಆಗ್ರಹಿಸಿದ್ದಾರೆ.