ಸುಳ್ಯ: ಬೆಳ್ತಂಗಡಿ ತಾಲೂಕಿನ ಪೂಂಜಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್ ಪೂಂಜ ಅವರು ರಾಜಕೀಯ ಪ್ರೇರಿತ ಭಾಷಣ ಮಾಡುವುದರ ಜೊತೆಗೆ, ಶಾಲಾ ಮಕ್ಕಳಿಂದ ರಾಜಕೀಯ ಘೋಷಣೆಗಳನ್ನು ಕೂಗಿಸಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ ಸುಳ್ಯ ಬ್ಲಾಕ್ ಸಮಿತಿಯ ಉಪಾಧ್ಯಕ್ಷ ಶ್ರವಣ್ ಮೇದಿನಡ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಗಳು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳನ್ನು ಕಲಿಸುವ ಪವಿತ್ರ ಸ್ಥಳಗಳಾಗಿವೆ. ಇಂತಹ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ರಾಜಕೀಯವನ್ನು ಬೆರೆಸುವುದು ಹಾಗೂ ಮುಗ್ಧ ವಿದ್ಯಾರ್ಥಿಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಇದು ಶಿಕ್ಷಣ ಸಂಸ್ಥೆಗಳ ಘನತೆ ಮತ್ತು ಮಕ್ಕಳ ಸ್ವತಂತ್ರ ಮನೋಭಾವಯಕ್ಕೆ ಧಕ್ಕೆ ತರುವಂತಹ ನಡೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಶಾಲಾ ಮಕ್ಕಳ ಮೇಲೆ ಹೇರುವ ಬದಲು, ಅವರಲ್ಲಿ ವೈಜ್ಞಾನಿಕ ಚಿಂತನೆ, ದೇಶಪ್ರೇಮ ಹಾಗೂ ಉತ್ತಮ ನಾಗರಿಕ ಮೌಲ್ಯಗಳನ್ನು ಬೆಳೆಸುವತ್ತ ಜನಪ್ರತಿನಿಧಿಗಳು ಗಮನಹರಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.೨
ಶ್ರವಣ್ ಮೇದಿನಡ್ಕ ಉಪಾಧ್ಯಕ್ಷರು, ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ, ಸುಳ್ಯ.