Featured, ಇತರೆ

ವೆಬ್ ಮಾಧ್ಯಮಗಳ ವಿರುದ್ಧ ಸುಳ್ಯ ಪೊಲೀಸರ ಸ್ವಯಂಪ್ರೇರಿತ ಪ್ರಕರಣ ರದ್ದು: ಪೊಲೀಸ್ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ

ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಬೇಡ ಎಂದು ಎಚ್ಚರಿಕೆ; ತೊಂದರೆಗೊಳಗಾದ ಮಾಧ್ಯಮಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವ ಎಚ್ಚರಿಕೆ.!!

ಸುಳ್ಯ, ನ.24: ವೆಬ್ ಮಾಧ್ಯಮಗಳಾದ ಕಹಳೆ ನ್ಯೂಸ್, ಝೂಮ್ ಇನ್ ಟಿ.ವಿ. ಮತ್ತು ಹೊಸಕನ್ನಡದ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 23ರಂದು ರದ್ದುಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಶ್ರೀಶಾನಂದ ಅವರು, ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡದಂತೆ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ

ಏನಿದು ಪ್ರಕರಣ?

2023ರ ಆಗಸ್ಟ್ 12ರಂದು ಸುಳ್ಯ ತಾಲೂಕಿನ ತೋಡಿಕಾನದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಮೊಹಮ್ಮದ್ ಜಲೀಲ್ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ವೇಳೆ ಜಾಲ್ಲೂರಿನ ಪುನೀತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯ ಲಾಕ್‌ಅಪ್‌ನಲ್ಲಿ ಇರಿಸಿದ್ದರು.

ಈ ನಡುವೆ ಆಗಸ್ಟ್ 13ರಂದು ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಬಂಧಿತ ಯುವಕರು ಬಿಡುಗಡೆಯಾಗಿದ್ದಾರೆ ಎಂಬ ವರದಿಯನ್ನು ಕಹಳೆ ನ್ಯೂಸ್, ಝೂಮ್ ಇನ್ ಟಿ.ವಿ. ಮತ್ತು ಹೊಸಕನ್ನಡ ಪ್ರಕಟಿಸಿದ್ದವು.

ಈ ವರದಿಗಳು ತಪ್ಪು ಮಾಹಿತಿ ಹೊಂದಿದ್ದು, ಪೊಲೀಸರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದರ ಜತೆಗೆ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ ಬೆಳ್ಳಾರೆ ಠಾಣೆಯ ಎಸ್‌ಐ ಈರಯ್ಯ ಡಿ.ಎನ್. ಅವರು ನೀಡಿದ ದೂರಿನ ಆಧಾರದಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಮೂರು ವೆಬ್ ಮಾಧ್ಯಮಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.

ಹೈಕೋರ್ಟ್ ಮೆಟ್ಟಿಲೇರಿದ ವೆಬ್ ಮಾಧ್ಯಮಗಳು

ಪ್ರಕರಣ ರದ್ದುಗೊಳಿಸುವಂತೆ ಕೋರಿ ಮೂರು ವೆಬ್ ಮಾಧ್ಯಮಗಳ ಪ್ರತಿನಿಧಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಪರವಾಗಿ ನ್ಯಾಯವಾದಿಗಳಾದ ಡಾ. ಅರುಣ್‌ಶ್ಯಾಮ್ ಪುತ್ತೂರು ಮತ್ತು ಸುಯೋಗ್ ಹೇರಳೆ ವಾದ ಮಂಡಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

ನಂತರ ನಡೆದ ವಿಚಾರಣೆಯಲ್ಲಿ ವಾದ ಆಲಿಸಿದ ನ್ಯಾಯಮೂರ್ತಿ ಶ್ರೀಶಾನಂದ ಅವರು ಮೂರು ಮಾಧ್ಯಮಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶಿಸಿದ್ದಾರೆ.

ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಬೇಡ: ಎಚ್ಚರಿಕೆ

ವಿಚಾರಣೆ ವೇಳೆ ಬೆಳ್ಳಾರೆ ಠಾಣೆಯ ಎಸ್‌ಐ ಈರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಘಟನೆ ನಡೆದಿರುವುದು, ನಾಯಕರು ಠಾಣೆಗೆ ಭೇಟಿ ನೀಡಿರುವುದು ಹಾಗೂ ಆರೋಪಿಯನ್ನು ಲಾಕ್‌ಅಪ್‌ನಲ್ಲಿ ಇರಿಸಿರುವುದು ಸತ್ಯ. ಈ ವಿಚಾರಗಳನ್ನು ಮಾಧ್ಯಮಗಳು ಫೋಟೋ ಸಹಿತ ವರದಿ ಮಾಡಿವೆ. ಇದರಲ್ಲಿ ಕೋಮು ದ್ವೇಷ ಹರಡುವ ಅಥವಾ ಮಾನಹಾನಿ ಮಾಡುವ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟರು.

ಪೊಲೀಸ್ ಇಲಾಖೆ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ನ್ಯಾಯಮೂರ್ತಿಗಳು, ತೊಂದರೆಗೊಳಗಾದ ಮಾಧ್ಯಮಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವಂತೆ ಆದೇಶಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್‌ಐ ಈರಯ್ಯ ಅವರು ಬೇಷರತ್ ವಿಷಾದ ವ್ಯಕ್ತಪಡಿಸಿ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಜಯ

ಹೈಕೋರ್ಟ್ ಆದೇಶವನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಸ್ವಾಗತಿಸಿದೆ. ಯಾವುದೇ ತಪ್ಪು ಮಾಡದಿದ್ದರೂ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಆರಂಭದಿಂದಲೇ ವಿರೋಧಿಸಿ ಕಾನೂನು ಹೋರಾಟ ನಡೆಸಲಾಗಿತ್ತು ಎಂದು ಘಟಕ ತಿಳಿಸಿದೆ.

ಯೂನಿಯನ್ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಹಾಗೂ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಅವರು ತೊಂದರೆಗೊಳಗಾದ ಮಾಧ್ಯಮಗಳ ಪರವಾಗಿ ಹೋರಾಟ ನಡೆಸಿದ್ದರು. ನ್ಯಾಯವಾದಿಗಳಾದ ಡಾ. ಅರುಣ್‌ಶ್ಯಾಮ್ ಪುತ್ತೂರು ಮತ್ತು ಸುಯೋಗ್ ಹೇರಳೆ ಅವರ ಸಮರ್ಥ ವಾದದಿಂದ ನ್ಯಾಯ ದೊರಕಿದೆ ಎಂದು ಯೂನಿಯನ್ ಪ್ರಕಟಣೆ ತಿಳಿಸಿದೆ.

Related Posts