Featured, ಅಂಕಣ

ಅಗಲಿದ ಸಂಪ್ಯದ ಮಾಜಿ ದಫ್ ಉಸ್ತಾದ್

ಯುವಕರ ಆವೇಶ ದ್ವನಿ ಸಂಪ್ಯ ಕೆಪಿ ಅಬೂಬಕ್ಕರ್ ಹಾಜಿ ಕಾಸರಗೋಡು ಇನ್ನು ನೆನಪು ಮಾತ್ರ

ಬಿ.ಕೆ.ಸ್ವಾದಿಕ್ ಅಲಿ ಸಂಪ್ಯ

(ಸಂಪ್ಯ ಉಸ್ತಾದ್ ಸ್ಮರಣ ಸಂಚಿಕೆಯಿಂದ)

ಸುಮಾರು ನಲ್ವತ್ತು ವರುಷಗಳ ಹಿಂದೆ ಸಂಪ್ಯ ಜುಮಾ ಮಸೀದಿಯಲ್ಲಿ ಯಾವುದಾದರೂ ತೀರ್ಮಾನಗಳನ್ನು ಕೈಗೊಳ್ಳುವಾಗ, ಯಾವುದಾದರೂ ಸಮಸ್ಯೆಗಳು ಉದ್ಭವಿಸಿ ಅದನ್ನು ಪರಿಹರಿಸುವಾಗ ನಗುಮುಖದೊಂದಿಗೆ ಸಕ್ರಿಯ ಪಾತ್ರವಹಿಸಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರಿದ್ದರು. ಮಸೀದಿಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯುವುದಿದ್ದರೆ ಅದರ ಮುಂಚೂಣಿಯಲ್ಲಿ ಅವರೇ ಇರುತ್ತಿದ್ದರು. ಮಸೀದಿಯ ಕಾರ್ಯಕ್ರಮಗಳಲ್ಲಿ ಅವರ ಪಾತ್ರವು ಅಪಾರವಾಗಿತ್ತು. ಅವರೇ ಕೆ.ಪಿ ಅಬೂಬಕ್ಕರ್ ಹಾಜಿ ಆಲಂಪಾಡಿ.

ಸಂಪ್ಯ ಮಸೀದಿಯಲ್ಲಿ ಸುಮಾರು ನಲವತ್ತೈದು ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ್ದ ಸಂಪ್ಯ ಉಸ್ತಾದರೆಂದೇ ಅರಿಯಲ್ಪಟ್ಟ ಮಹಾನುಭಾವರಾದ ಮರ್ಹೂಂ ಸಂಪ್ಯ ಬಾಪುಕುಂಞಿ ಉಸ್ತಾದರ ನಿಕಟವರ್ತಿಯಾಗಿದ್ದ ಹಾಜಿಯವರು ಉಸ್ತಾದರ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಸಾಥ್ ನೀಡುತ್ತಿದ್ದರು.

1965 ರಲ್ಲಿ ವ್ಯಾಪಾರದ ನಿಮಿತ್ತ ಕಾಸರಗೋಡಿನಿಂದ ಸಂಪ್ಯಕ್ಕೆ ಬಂದಿದ್ದ ಕೆ.ಪಿ ಹಾಜಿಯವರು ಮಸೀದಿಯ ಸಮೀಪದಲ್ಲಿಯೇ ದಿನಸಿ ಅಂಗಡಿಯಿಟ್ಟು ವ್ಯಾಪಾರ ಆರಂಭಿಸಿ ಇಲ್ಲಿಯೇ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಕೆ.ಪಿ ಹಾಜಿಯರು ಅಪಾರ ದೀನೀ ಪ್ರೇಮಿಯಾಗಿದ್ದರು. ಸಂಪ್ಯ ಜಮಾಅತಿನ ಅಧೀನದಲ್ಲಿರುವ ‘ನೂರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್’ ಎಂಬ ಯುವಕರ ಸಂಘಟನೆಯಲ್ಲಿ ಸುಮಾರು ಹದಿನಾರು ವರ್ಷಗಳ ಕಾಲ ಅದ್ಯಕ್ಷರಾಗಿ ಸೇವೆ ಸಲ್ಲಿಸಿ ಯುವಕರ ದೀನೀ ಚಟುವಟಿಕೆಗಳ ಆವೇಶಕ್ಕೆ ಕಾರಣರಾಗಿದ್ದರು. ಹಾಜಿಯವರು ಓರ್ವ ಉತ್ತಮ ಹಾಡುಗಾರರೂ ಆಗಿದ್ದರು ಮಾತ್ರವಲ್ಲ ಸಂಪ್ಯ ರಿಫಾಯಿಯಾ ದಫ್ ಸಂಘದ ಉಸ್ತಾದರೂ ಕೂಡಾ ಆಗಿದ್ದರು.

ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಸಂಪ್ಯ ಜಮಾಅತಿನ ಯುವಕರಿಗೆ ಮಾರ್ಗದರ್ಶನ ನೀಡಿ ನವಚೈತನ್ಯವನ್ನು ತುಂಬಿ ದೀನೀ ಏಳಿಗೆಗಾಗಿ ಶ್ರಮಿಸಿದ್ದ ಕೆ.ಪಿ ಅಬೂಬಕ್ಕರ್ ಹಾಜಿಯವರು 1984 ರಲ್ಲಿ ಮತ್ತೆ ತನ್ನ ಸ್ವಂತ ಊರಾದ ಕಾಸರಗೋಡಿಗೆ ಮರಳುವಾಗ ಸಂಪ್ಯದ ಜನರು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟಿದ್ದರು. ಕಳೆದ ಕೆಲವು ದಿವಸಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಪಿ ಅಬೂಬಕ್ಕರ್ ಹಾಜಿಯವರು ಅಲ್ಲಾಹನ ತೀರ್ಮಾನದ ಪ್ರಕಾರ ರಜಬ್ 27 ರ ಆ ಪವಿತ್ರವಾದ ರಾತ್ರಿ ಈ ತಾತ್ಕಾಲಿಕ ಲೋಕಕ್ಕೆ ವಿದಾಯ ಹೇಳಿದರು.

m

Related Posts