ತಿರುವನಂತಪುರಂ: ಮೇ ತಿಂಗಳಲ್ಲಿ ಕೇರಳದಲ್ಲಿ 182 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸಾರ್ವಜನಿಕರು, ವಿಶೇಷವಾಗಿ ಕೊಟ್ಟಾಯಂ, ಎರ್ನಾಕುಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಜಾಗರೂಕರಾಗಿರಲು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, “ಆಗ್ನೇಯ ಏಷ್ಯಾದ ದೇಶಗಳು ಹೆಚ್ಚಿನ ಸಂಖ್ಯೆಯ ಕರೋನಾ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಮತ್ತು ಕೇರಳದಲ್ಲಿಯೂ ಕರೋನಾ ಹೆಚ್ಚಾಗುವ ಸಾಧ್ಯತೆಯಿದೆ. ತೀವ್ರತೆ ಹೆಚ್ಚಿಲ್ಲದಿದ್ದರೂ, ಆತ್ಮರಕ್ಷಣೆ ಮುಖ್ಯವಾಗಿದೆ ಎಂದಿದ್ದಾರೆ.
ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಕ್ರಮ ಕೈಗೊಳ್ಳಲು ಕೇರಳ ರಾಜ್ಯ ಕ್ಷಿಪ್ರ ಪ್ರತಿಕ್ರಿಯೆ ತಂಡದ (RRT) ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿತ್ತು. ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಗೆ COVID-19 ಪರೀಕ್ಷೆಯನ್ನು ಹೆಚ್ಚಿಸಲು ಸಭೆ ನಿರ್ಧರಿಸಿದೆ. ಆಸ್ಪತ್ರೆಗಳು ಆರ್‌ಟಿ-ಪಿಸಿಆರ್ ಕಿಟ್‌ಗಳು, ರಕ್ಷಣಾ ಸಾಧನಗಳು ಮತ್ತು ಮಾಸ್ಕ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಬೇಕು ಎಂದಿದ್ದಾರೆ.
ಪ್ರಸ್ತುತ ಕೋವಿಡ್ ತಳಿಗಳು ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಅವುಗಳ ತೀವ್ರತೆ ಹೆಚ್ಚಿಲ್ಲ. “ಆದಾಗ್ಯೂ, ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ” ಎಂದು ಸಚಿವೆ ಸ್ಪಷ್ಟಪಡಿಸಿದರು. ಮೇ ತಿಂಗಳಲ್ಲಿ ಕೇರಳದಲ್ಲಿ ಕೊರೊನಾ ಸೋಂಕಿಗೆ ಒಳಗಾದ 182 ಜನರಲ್ಲಿ, ಕೊಟ್ಟಾಯಂನಲ್ಲಿ ಅತಿ ಹೆಚ್ಚು 57 ಜನರು, ಎರ್ನಾಕುಲಂನಲ್ಲಿ 34 ಮತ್ತು ತಿರುವನಂತಪುರಂನಲ್ಲಿ 30 ಜನರು ಇದ್ದಾರೆ ಎನ್ನಲಾಗಿದೆ.




m

