Featured, ಇತರೆ, ಸ್ಥಳೀಯ

ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷರ ವಾರ್ಡಿನಲ್ಲಿ — ಚರಂಡಿ ಇಲ್ಲ, ಆದರೆ ಹೊಳೆ ಉಚಿತವಾಗಿ ಹರಿಯುತ್ತಿದೆ!

ಸುಳ್ಯ ಪಟ್ಟಣದಲ್ಲಿ ಎಲ್ಲೆಡೆ ಅಭಿವೃದ್ಧಿಯ ಕೊರತೆಯ ಗಾಳಿ ಬೀಸುತ್ತಿದೆ ಅಂತೆ! ಆದರೆ ಸುಳ್ಯ ನಗರ ಉಪಾಧ್ಯಕ್ಷರ ವಾರ್ಡಿನಲ್ಲಿ  ಅದ್ಭುತವಾದ ನದಿ ಯೋಜನೆ ಜಾರಿಯಲ್ಲಿದೆ! ಸಮರ್ಪಕವಾಗಿ ಚರಂಡಿ ವ್ಯವಸ್ಥೆ  ಇಲ್ಲದ ಕಾರಣ — ಇಲ್ಲಿ ಮಳೆ ಬಂತು ಅಂದ್ರೆ, ರಸ್ತೆ ಹೊಳೆಯಾಗಿ ಬದಲಾಗುತ್ತದೆ !! ಸುಳ್ಯ ನಗರ ಪಂಚಾಯತ್ ಗೆ ಒಳಪಡುವ 5ನೇ ವಾರ್ಡಿನ ಹಳೆಗೇಟು ಅಡ್ಕ ಬಡಾವಣೆ ರಸ್ತೆಯ ಗೋಳು ಹೇಳತೀರದಷ್ಟು .!!? ಹಲವಾರು ವರ್ಷಗಳಿಂದ ಈ ಸಮಸ್ಯೆ ಕಣ್ಣಿಗೆ ಕಾಣುವಷ್ಟು ದೊಡ್ಡ ಸಮಸ್ಯೆಯಾಗಿದ್ದರೂ ಆಡಳಿತದ ಕಿವಿಗೆ ತಟ್ಟದಂತಾಗಿದೆ. ಮಳೆಯಾಗುತ್ತಿದ್ದಂತೆ ಈ ರಸ್ತೆ ಹಳ್ಳಕೊಳದಂತೆ ಬದಲಾಗುತ್ತದೆ, ವಾಹನ ಸವಾರರು ಮಾತ್ರವಲ್ಲ ಪಾದಚಾರಿಗಳು ಸಹ ನರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಎಂದರೆ ವಾಹನ ಸಾಗಲು ಇರುವ ಮಾರ್ಗ, ಆದರೆ ಇಲ್ಲಿ ಮಳೆ ಬಂತು ಅಂದ್ರೆ ಅದು ನದಿಯ ಮಾರ್ಗವಾಗಿಬಿಡುತ್ತದೆ! ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ನೀರು ರಸ್ತೆಯ ಮಧ್ಯೆ ನಿಂತು ಹೋಗಿ, ವಾಹನ ಚಾಲಕರಿಗೂ, ನಡೆದು ಹೋಗುವವರಿಗೂ ಕಂಟಕವಾಗಿದೆ.

ಇನ್ನೂ ಅದೇ ಮಳೆ ನೀರು ತುಂಬಿದ ರಸ್ತೆಯಲ್ಲಿ ಚಾಣಾಕ್ಷ ತನ ತೋರಿ ಸಾಗುವ ಸಾಹಸ ಮಾಡಿದರಂತು ಗುಂಡಿಗೋ ಚರಂಡಿಗೋ ಬೀಳೋದಂತು ಗ್ಯಾರಂಟಿ. ತಲೆ ಕೆಡಿಸ್ಕೋ ಬೇಡಿ ಇದು ನಗರಾಡಳಿತದ ಗ್ಯಾರಂಟಿ ಅಂತಾರೆ ಜನ!.
ಇನ್ಯಾವಗ ಅಭಿವೃದ್ಧಿನೋ ನಗರಾಡಳಿತ ಇನ್ನೇನಕ್ಕೆ ಇರೋದು ಆ ಪರಮಾತ್ಮಾನೆ ಬಲ್ಲ! ಇನ್ಯಾರಾದ್ರು ನಗರಾಡಳಿತದ ಈ ಒಂದು ವಿಶೇಷ ಹೊಳೆಗೆ ಬಿದ್ದು ಕಣ್ಣು ಮುಚ್ಚೋ ಮೊದಲು ನಗರಾಡಳಿತ ಕಣ್ಣು ತೆರೆಯಲಿ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಸೆ.

Related Posts