ಸುಳ್ಯ, ಅ.30 – 2012ರಲ್ಲಿ ಸುಳ್ಯದಲ್ಲಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್ ಹಾಗೂ ತತ್ವಮಸಿ ಎಂಟರ್‌ಪ್ರೈಸಸ್ ಹೆಸರಿನಡಿಯಲ್ಲಿ ಸ್ಕೀಮ್ ಪ್ರಾರಂಭಿಸಿ ಸಾವಿರಾರು ಜನರನ್ನು ವಂಚಿಸಿದ ಪ್ರಕರಣದಲ್ಲಿ ಆರೋಪಿತರಾದ ಏಳು ಮಂದಿ ಅಕ್ಟೋಬರ್ 30ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾದರು.
ನ್ಯಾಯಾಲಯದ ವಿಚಾರಣೆಯಲ್ಲಿ ಮೂವರ ಮೇಲೆ ಅಪರಾಧ ಸಾಬೀತಾಗಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಸ್ಟೀಮ್ ನಡೆಸಿ ಸಾವಿರಾರು ಗ್ರಾಹಕರಿಂದ ಕೋಟಿ ಕೋಟಿ ರೂಪಾಯಿ ಸಂಗ್ರಹಿಸಿ ನಂತರ ಪಂಗನಾಮ ಹಾಕಿ ಪರಾರಿಯಾದ ಆರೋಪದ ಮೇರೆಗೆ ಗ್ರಾಹಕರು ಟ್ರಸ್ಟ್ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ನ್ಯಾಯಾಧೀಶರ ವಿಚಾರಣೆಯಲ್ಲಿ ಕೋಟ್ಯಾಂತರ ರೂಪಾಯಿ ವಂಚನೆಯು ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಟ್ರಸ್ಟ್ ಸದಸ್ಯರಾದ ಗಣೇಶ್ ಕೆ.ಎಸ್., ಗೀತಾ, ಹಾಗೂ ಭಾರತಿ ಪ್ರಕಾಶ್ ರವರ ವಿರುದ್ಧ ಅಪರಾಧ ಸಾಬೀತಾಗಿದ್ದು, ಇವರನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ. ನ್ಯಾಯಾಲಯವು ಇವರಿಗೆ ನವೆಂಬರ್ 3ರಂದು ಹಾಜರಾಗುವಂತೆ ಆದೇಶಿಸಿದ್ದು, ಅಂದು ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಉಳಿದ ನಾಲ್ವರು — ಕೃಷ್ಣಪ್ಪ ಗೌಡ, ಗೀತಾ ಗಣೇಶ್, ಕಮಲಾಕ್ಷ, ಹಾಗೂ ನಾಗೇಶ್ — ಇವರನ್ನು ವಿಚಾರಣೆ ನಂತರ ಆರೋಪಿಯಿಂದ ಖುಲಾಸೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

