ತಂದೆ–ಮಗಳಿಬ್ಬರ ಜೀವ ಉಳಿಸಿದ ಪೊಲೀಸ್ ಇಲಾಖೆಯ ಮಾನವೀಯ ಕಾರ್ಯಕ್ಕೆ ಶ್ಲಾಘನೆಗಳ ಸುರಿಮಳೆ
ಮಂಗಳೂರು, ನ. 4:
ಹೆಂಡತಿಯೊಡನೆ ನಡೆಯುತ್ತಿದ್ದ ಜಗಳ ಮತ್ತು ಮನಸ್ತಾಪದಿಂದ ಬೇಸತ್ತ ಪತಿ ರಾಜೇಶ್, ತನ್ನ ಪುಟ್ಟ ಮಗಳನ್ನು ಕರೆದುಕೊಂಡು ಸೋಮವಾರ ಸಂಜೆ ತಣ್ಣೀರುಬಾವಿ ಬೀಚ್ ಕಡೆಗೆ ತೆರಳಿದ್ದ. “ನಾವು ಸಾಯೋಣ ಮಗಳೇ… ನಿನ್ನ ತಾಯಿ ಸರಿಯಲ್ಲ… ನಮಗೆ ಯಾರೂ ಬೇಡ” ಎಂದು ಹೇಳುತ್ತಾ ಸಮುದ್ರದತ್ತ ನಡೆಯುವ ದೃಶ್ಯವನ್ನು ಸ್ವತಃ ಮೊಬೈಲ್ನಲ್ಲಿ ವಿಡಿಯೋ ರೂಪದಲ್ಲಿ ದಾಖಲಿಸಿದ್ದಾನೆ.
ಆ ವಿಡಿಯೋದಲ್ಲಿ ತಂದೆ–ಮಗಳ ನೆರಳು, ಸಮುದ್ರದ ಅಲೆಗಳ ಶಬ್ದ ಮತ್ತು ಪುಟ್ಟ ಮಗಳ “ಸಾಯೋದು ಬೇಡಪ್ಪಾ” ಎಂಬ ಮನ ಕಲುಕುವ ಮಾತುಗಳು ಮಾತ್ರ ಕೇಳಿ ಬರುತ್ತಿದ್ದವು. ಈ ವಿಡಿಯೋ ಶೀಘ್ರದಲ್ಲೇ ವಾಟ್ಸಾಪ್ನಲ್ಲಿ ವೈರಲ್ ಆಗಿ, ಪಣಂಬೂರು ಪೊಲೀಸರಿಗೆ ತಲುಪಿತು.
ಪೊಲೀಸರು ಸ್ಥಳ ಪತ್ತೆ ಹಚ್ಚಲು ಪ್ರಯತ್ನ ನಡೆಸಿ, ಪಣಂಬೂರು ಬೀಚ್ ಸೇರಿದಂತೆ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಸ್ಥಳೀಯರಿಂದ “ಒಬ್ಬಾತ ಪುಟ್ಟ ಮಗಳೊಂದಿಗೆ ಬಂದಿದ್ದಾನೆ” ಎಂಬ ಮಾಹಿತಿ ಲಭಿಸಿತು.
ಅದರ ಆಧಾರದ ಮೇಲೆ ಪೊಲೀಸರು ಯುವಕನ ವಿಳಾಸವನ್ನು ಪತ್ತೆಹಚ್ಚಿ ಕಾವೂರು ಅಂಬಿಕಾ ನಗರ ಪ್ರದೇಶಕ್ಕೆ ಧಾವಿಸಿದರು. ಮನೆಯೊಳಗೆ ತೆರಳಿದಾಗ, ರಾಜೇಶ್ ನೇಣಿಗೆ ತಯಾರಾಗುತ್ತಿದ್ದ ದೃಶ್ಯ ಕಂಡುಬಂತು. ಮಗಳನ್ನು ಪಕ್ಕದಲ್ಲೇ ಕೂರಿಸಿ ಕೊನೆಯ ಹೆಜ್ಜೆ ಇಡುತ್ತಿದ್ದ ವೇಳೆ ಪೊಲೀಸರು ದೌಡಾಯಿಸಿ ಇಬ್ಬರನ್ನೂ ಹಿಡಿದು ಜೀವ ಉಳಿಸಿದರು.
ಪಣಂಬೂರು ಠಾಣೆಯ ಸಿಬ್ಬಂದಿಯ ತ್ವರಿತ ಕ್ರಮದಿಂದ ಮಗಳೂ ತಂದೆಯೂ ಹೊಸ ಜೀವ ಪಡೆದರು.
ಸಮಯೋಚಿತ ನಿರ್ಧಾರ ಕೈಗೊಂಡ ಪೊಲೀಸ್ ಸಿಬ್ಬಂದಿಗೆ ಸ್ಥಳೀಯರಿಂದ ಶ್ಲಾಘನೆಗಳ ಸುರಿಮಳೆ.

